ನಾಟ್ಯರಾಣಿ ಚಿನ್ನಮ್ಮದೇವಿ

ನಾಟ್ಯರಾಣಿ ಚಿನ್ನಮ್ಮದೇವಿ



ನಾನು ಮತ್ತು ಚಿನ್ನಮ್ಮದೇವಿಯವರು... ಒಂದೇ ನಾಟ್ಯಗುರುಗಳ ಅಚ್ಚುಮೆಚ್ಚಿನ ಶಿಷ್ಯೆಯರು. ವಿಜಯನಗರದಲ್ಲಿಯೇ ಅತ್ಯಂತ ಪ್ರಸಿಧ್ಧಿಯಾದಂತ ಗುರುಗಳವರು, ನಾಟ್ಯಕಲಾ ಪ್ರವೀಣರು. ಆದರೆ ಬಹಳ ಶಿಸ್ತು, ಕೆಲವೊಮ್ಮೆ ತುಂಬಾ ಕಠೋರ ಎನಿಸುವಷ್ಟರಮಟ್ಟಿಗೆ ನಮ್ಮನ್ನು ನಡೆಸಿಕೊಳ್ಳುತ್ತಿದ್ದರು. ಬರಿಗಾಲಲ್ಲಿ, ವಿಜಯನಗರದ ಉರಿ ಬಿಸಿಲಿಲ್ಲಿ, ಸುಡುತ್ತಿರುವ ಬಂಡೆಯ ಮೇಲೆ ನಮ್ಮ ತಾಲೀಮು! ಆದರೆ ಚಿನ್ನಮ್ಮನಂತಹ ನಾಟ್ಯಪ್ರಿಯರಿಗೆ ಇದಾವುದರ ಲೆಕ್ಕವೇ ಇಲ್ಲ... ಮೈಮರತು ನರ್ತಿಸುತ್ತಿದ್ದಳು. ನಮ್ಮ ಅಚ್ಚುಮೆಚ್ಚಿನ ಸಮಯವೆಂದರೆ ಬೆಳದಿಂಗಳ ಸಮಯದಲ್ಲಿ ನಡೆಯುತ್ತಿದ್ದ ತರಬೇತಿ.

   ಒಮ್ಮೆ ಬೆಳದಿಂಗಳ ಬೆಳಕಿನಲ್ಲಿ ನಮ್ಮ ನರ್ತನದ ಅಭ್ಯಾಸ ನಡೆಯುತ್ತಿರುವಾಗಲೇ ಅನತಿದೂರದಲ್ಲಿ ಬಂಡೆಯ ಮೇಲೆ ಕುಳಿತ ವ್ಯಕ್ತಿಯೊಬ್ಬರು ಚಿನ್ನಮ್ಮನ  ನೃತ್ಯವನ್ನು ಮಂತ್ರ ಮುಗ್ಧರಾಗಿ ನೋಡುತ್ತ ಕುಳಿತಿದ್ದರು. ನಮ್ಮ ಆಭ್ಯಾಸ ಮುಗಿದರೂ ಸಹ ಅಲ್ಲಿಂದ ಕದಲುವ ಲಕ್ಷಣಗಳೇ ಕಾಣಲಿಲ್ಲ. ಬೆಳದಿಂಗಳ ಮಂದ ಬೆಳಕಿನಲ್ಲಿಯೂ ಅವರ ಆಕರ್ಷಕ ವ್ಯಕ್ತಿತ್ವ ಎದ್ದು ಕಾಣುತ್ತಿತ್ತು. ನಮ್ಮ ಗೆಜ್ಜೆ, ದಿರಿಸುಗಳನ್ನು ಎತ್ತಿಕೊಂಡು ಅವರ ಮುಂದೇ ಹಾದು ಹೋದೆವು. ಹತ್ತಿರದಿಂದ ನೋಡುತ್ತಲೇ ಎಲ್ಲೋ ನೋಡಿದ ನೆನಪು , ಆದರೆ ನಿರ್ದಿಷ್ಟವಾಗಿ ಯಾರೆಂದು ನನಗಾಗಲೀ, ಚಿನ್ನಮ್ಮನಿಗಾಗಲೀ ತಿಳಿಯಲಿಲ್ಲ. ಹುಣ್ಣಿಮೆಯಾದ ಮೂರು ನಾಲ್ಕು ರಾತ್ರಿಗಳ ನಂತರ ನಮ್ಮ ರಾತ್ರಿಯ ಅಭ್ಯಾಸ ನಿಂತು ಹಗಲಿನ ಅಭ್ಯಾಸ ಶುರುವಾಯಿತು. ಆದರೆ ಹಗಲಿನ ಅಭ್ಯಾಸದ ಸಮಯದಲ್ಲಿ ಆ ವ್ಯಕ್ತಿ ಬರುತ್ತಿರಲಿಲ್ಲ. ಚಿನ್ನಮ್ಮನ ಚಟಪಟಿಕೆಯನ್ನು ಕಿರುಗಣ್ಣಿನಲ್ಲೇ ಗಮನಿಸುತ್ತಿದ್ದೆ. ನೃತ್ಯಾಭ್ಯಾಸದ ಸಮಯದಲ್ಲಿ ವಿಚಲಿತರಾದರೆ ಗುರುಗಳು ಕೋಪಗೊಳ್ಳುತ್ತಾರೆ ಎಂದು ಗೊತ್ತಿದ್ದರೂ ಕಣ್ಣುಗಳು ಅಲ್ಲಿ ಇಲ್ಲಿ ಹುಡುಕುತ್ತಲೇ ಇದ್ದವು.

       ಪುನಃ ಹುಣ್ಣಿಮೆಯ ಸಮಯದ ಅಭ್ಯಾಸ ಪ್ರಾರಂಭದ ಮೊದಲ ದಿನವೇ ಅದೇ ಬಂಡೆಯ ಮೇಲೆ ಕುಳಿತಿದ್ದರು‌. ಆ ರಾತ್ರಿಯಂತೂ ಚಿನ್ನಮ್ಮ ಮೈಮರೆತು ನರ್ತಿಸಿದಳು. ಗುರುಗಳಿಗಾದ ಆನಂದ ಹೇಳತೀರದು. ಗುರುಗಳೇ ಎದ್ದು ಆ ವ್ಯಕ್ತಿಯ ಬಳಿ ಹೋಗಿ ವಂದಿಸಿ ಮಾತನಾಡತೊಡಗಿದರು. ನಮ್ಮ ಗುರುಗಳೇ ಅವರಿಗೆ ವಂದಿಸುವುದೆಂದರೆ ಯಾರೋ ವಿಜಯನಗರದ ದೊಡ್ಡ ವ್ಯಕ್ತಿಗಳಿರಬಹುದು ಎನಿಸಿತು. ಚಿನ್ನಮ್ಮನೂ ಮೈಮರೆತು ಅವರನ್ನೇ ಎವೆಯಿಕ್ಕದೆ ನೋಡುತ್ತಿದ್ದರು. ಸ್ವಲ್ಪ ಹೊತ್ತಿನಲ್ಲೇ ಗುರುಗಳು ನಮ್ಮೆಲ್ಲರಿಗೂ ಹೊರಡಲು ಸನ್ನೆ ಮಾಡಿದರು. ಆಯಸ್ಕಾಂತದಂತೆ ಒಬ್ಬರಿಗೊಬ್ಬರು ಸೆಳೆದು ನಿಂತಿದ್ದ ಚಿನ್ನಮ್ಮ ಮತ್ತು ಆ ವ್ಯಕ್ತಿಯನ್ನು ಬಿಟ್ಟು ನಾವೆಲ್ಲರೂ ಅಲ್ಲಿಂದ ನಿರ್ಗಮಿಸಿದೆವು. ನಾನೇ ಧೈರ್ಯ ಮಾಡಿ ಗುರುಗಳನ್ನು ಕೇಳಿದೆ...ಯಾರು ಆ ವ್ಯಕ್ತಿ ಎಂದು. ಗುರುಗಳ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು...
   'ಯಾರಿರಬಹುದು ಎಂದು ನಿನಗೇ ಗೊತ್ತಾಗುತ್ತದೆ...ತಾಳ್ಮೆ ಇರಲಿ' ಎಂದು ನನಗೇ ಬುಧ್ಧಿವಾದ ಹೇಳಿದರು. ನನ್ನ ಮನಸ್ಸಿನ ಗೊಂದಲ ಇನ್ನೂ ಹೆಚ್ಚಾಯಿತು.
   ಯಾರಿರಬಹುದು?


ಮರುದಿನದ ನೃತ್ಯಾಭ್ಯಾಸಕ್ಕೂ 'ಇವರು' ಪ್ರತ್ಯಕ್ಷ್ಯ .ಚಿನ್ನಮ್ಮದೇವಿಯಂತೂ ಈ ಲೋಕದವಳೇ ಅಲ್ಲವೆಂಬಂತೆ ನರ್ತಿಸುತ್ತಿದ್ದಳು. ನನಗೆ ಅವರು ಯಾರೆಂದು ಹೇಳುತ್ತಿಲ್ಲ...ಒಂದೇ ಸಲಕ್ಕೆ ಕೋಪ ಬಂತು ಅವಳ ಮೇಲೆ. ಇಷ್ಟುದಿನದ ಸ್ನೇಹಕ್ಕೆ ಬೆಲೆಯೇ ಇಲ್ಲವೇ?
      ನಾಲ್ಕಾರು ದಿನಗಳು ಮಾತಾಡಿಸಲಿಲ್ಲ. ಅಷ್ಟರಲ್ಲಿ ಬೆಳದಿಂಗಳ ಅಭ್ಯಾಸ ಮುಗಿಯಿತು. ಇನ್ನು ಅವರ ಭೇಟಿ ಸಾಧ್ಯವಿಲ್ಲ...ಚಿನ್ನಮ್ಮನಂತೂ ಕಳಾಹೀನರಾಗಿಟ್ಟರು. ಅದೇನು ಮೋಡಿ ಮಾಡಿದ್ದರೋ..ಅದೇನೆಲ್ಲಾ ಮಾತಾಡಿದರೋ, ಕನಸಿನ ಲೋಕದಲ್ಲೇ ತೇಲುತ್ತಿದ್ದರು ಆ ದಿನಗಳಲ್ಲಿ, ಮುಂದಿನ ಹುಣ್ಣಿಮೆಗೆ ಚಾರ್ವಾಕದಂತೆ ಕಾಯುತ್ತಾ...
      ಮುಂದಿನ ದಿನಗಳಲ್ಲಿ ನಮ್ಮ ತಂಡದ ಒಂದು ನೃತ್ಯ ಪ್ರದರ್ಶನದ ತಯಾರಿಯಲ್ಲಿ ನಾವಲ್ಲಾ ನಿರತರಾಗಿದ್ದೆವು. ಆದರೆ ಚಿನ್ನಮ್ಮ ಮಾತ್ರ ಖಿನ್ನಳಾಗಿ ಕೂತಿದ್ದಳು. ಓಳಗಿನ ತಳಮಳವನ್ನು ಹೇಳಿಕೊಳ್ಳದ ಪರಿಸ್ಥಿತಿ. ಯಾಕಿಷ್ಟು ಗೌಪ್ಯ...ಏನು ವಿಷಯ.
      ಅದೊಂದು ರಾತ್ರಿ ಅನಿರೀಕ್ಷಿತವಾಗಿ ಚಿನ್ನಮ್ಮದೇವಿ ನಮ್ಮ ಮನೆಗೆ ಬಂದು ಗಳಗಳನೆ ಅಳಲು ಶುರುಮಾಡಿ ಕೊಂಡರು..ನನಗಂತೂ ದಿಗಿಲಿಡಿದು ಬಿಟ್ಟಿತ್ತು. ಏನೋ ಅನಾಹುತವೇ ನಡೆದಿರ ಬೇಕು..ಚಿನ್ನಮ್ಮನಂತ ಗಟ್ಟಿಗಿತ್ತಿ ಸಣ್ಣಪುಟ್ಟ ವಿಷಯಗಳಿಗೆ ಹೆದರುವವಳೇ ಅಲ್ಲ...ಸ್ವಲ್ಪ ಸಮಾಧಾನವಾದ ನಂತರ ಒಂದೊಂದಾಗಿ ಗುಟ್ಟುಗಳೆಲ್ಲಾ ಹೊರಬರಲಾರಂಬಿಸಿದವು...ಕೇಳುತ್ತಿದ್ದಂತಯೇ ನವರಸಗಳ ನದಿಯೇ ಹರಿದು ಹೋಯ್ತ..ಮನಸ್ಸಿನಲ್ಲಿ
     ಶೃಂಗಾರ, ವಿಸ್ಮಯ, ಉತ್ಸಾಹ, ಹಾಸ್ಯ,  ಇನ್ನು ಏನೇನೋ, ಕೊನೆಗೆ ಆತಂಕ..ಭಯ.

     ನಮ್ಮ ನೃತ್ಯಾಭ್ಯಾಸವನ್ನು ನೋಡಲು ಬರುತ್ತಿದ್ದವರು ಬೇರಾರೂ ಅಲ್ಲ ವಿಜಯನಗರ ಸಾಮ್ರಾಜ್ಯದ ಯುವರಾಜ ಕೃಷ್ಣದೇವರಾಯರಂತೆ..ಇಬ್ಬರಲ್ಲೂ ಪ್ರೇಮಾಂಕುರವಾಗಿದೆಯಂತೆ...ಮದುವೆಯಾಗುವ ವಚನವನ್ನೂ ಕೊಟ್ಟದ್ದಾರಂತೆ...ಆದರೆ ಕೃಷ್ಣದೇವರಾಯರನ್ನು ಕೊಲ್ಲಿಸುವ ಹುನ್ನಾರ ನಡೆದಿದೆಯಂತೆ..ಅಪ್ಪಾಜಿ ತಿಮ್ಮರಸು ಅವರನ್ನು ಸದ್ಯಕ್ಕೆಲ್ಲೋ ಅಡಗಿಸಿದ್ದಾರಂತೆ...ಅವರ ಕ್ಷೇಮ ಸಮಾಚಾರದ ಬಗ್ಗೆ ಈಗ ಹಲವಾರು ದಿನಗಳಿಂದ ಯಾರೂ ಏನು ಹೇಳುತ್ತಿಲ್ಲ...ಎನ್ನುತ್ತಾ ಮತ್ತೊಮ್ಮೆ ಕಣ್ಣೀರಧಾರೆಯನ್ನು ಹರಿಸಿದರು. ನಾನಂತೂ ಮೂಕವಿಸ್ಮಿತಳಾಗಿ ಕುಳಿತು ಬಿಟ್ಟೆ..  ನನ್ನನ್ನೇ ನಾನು ಸಂಭಾಳಿಸಲಾಗದೆ. ನನ್ನ ಸುತ್ತಲಿನ ಪ್ರಪಂಚವಲ್ಲಾ ಜೋರಾಗಿ ಗಿರಕಿ ಹೊಡೆಯುತ್ತಿತ್ತು.

     ಕಾಲಾಯ ತಸ್ಮೈನಮಃ...
ಕೃಷ್ಣದೇವರಾಯರು ಮುಂದೊಮ್ಮೆ ಸುರಕ್ಷಿತವಾಗಿ ಹೊರ ಬಂದರು. ಅದ್ದೂರಿಯ ಪಟ್ಟಾಭಿಷೇಕವೂ ಆಯಿತು. ವಿಜಯನಗರ ಸಾಮ್ರಾಜ್ಯ ಉದ್ದಗಲಕ್ಕೆ ವಿಸ್ತಾರ ಗೊಳ್ಳುತ್ತಾ ಹೋಯಿತು. ಬಹಮನಿ ಸುಲ್ತಾನರ ಕಾಟವಿಲ್ಲದೆ ಎಲ್ಲೆಡೆ ಶಾಂತಿ, ಸಮೃಧ್ಧಿ ನೆಲೆಸಿತು.

         ಕೃಷ್ಣದೇವರಾಯರು ಒಬ್ಬ ನರ್ತಕಿಗೆ ಕೊಟ್ಟ ವಚನವನ್ನು ಚಾಚೂ ತಪ್ಪದೆ ಪಾಲಿಸಿದರು. ಚಿನ್ನಮ್ಮದೇವಿಯನ್ನು ಮದುವೆಯಾದರು!

 ಮದುವೆ ಎಂದರೆ ಎಂಥಹ ಮದುವೆ...ವಿಜಯ ನಗರವನ್ನು ಸ್ವರ್ಗಕ್ಕಿಂತಾ ಸುಂದರವಾಗಿ ಅಲಂಕರಿಸಲಾಗಿತ್ತು. ಸಾಮ್ರಾಜ್ಯದ ಎಲ್ಲಾ ನರ್ತಕಿಯರು ವಧುವಿನ ಕಡೆಯವರು! ಎಲ್ಲೆಡೆಯಲ್ಲೂ ಸಂಭ್ರಮದ ಹೊಳೆ ಹರಿಯುತ್ತಿತ್ತು. ಒಂದು ವಾರದವರೆಗೂ ಹಗಲು ರಾತ್ರಿ ಎನ್ನದೆ ಗಾಯನ, ನರ್ತನಗಳು ನಿರಂತರವಾಗಿ ನಡೆದವು. ಚಿನ್ನಮ್ಮನನ್ನು ಚಿನ್ನ, ವಜ್ರ ವೈಢೂರ್ಯಗಳ ರಾಶಿಯಲ್ಲೇ ಮುಳುಗಿಸಿ ಬಿಟ್ಟರು ಸಾಮಂತರ ಪತ್ನಿಯರು. ಚಿನ್ನಮ್ಮನ ಆತ್ಮೀಯ ಗೆಳತಿ ಎನ್ನುವ ವಿಶೇಷ ಸನ್ಮಾನ ನನಗೆ. ಆ ಒಂದು ಆತ್ಮೀಯತೆ ಕೊನೆವರೆಗೂ ಕಾಪಾಡಿಕೊಂಡು ಬಂದೆವು.

         ಕೃಷ್ಣದೇವರಾಯರು ಯುಧ್ಧಗಳಲ್ಲಿ ವಿಜಯಿಯಾಗಿ ಬಂದಾಗಲೆಲ್ಲಾ ಅಲ್ಲಿಂದ ತಂದ ಮುತ್ತು ರತ್ನ, ವಜ್ರ ವೈಢೂರ್ಯ ಗಳನ್ನು  ತಮ್ಮ ರಾಣಿಯರ ಖಜಾನೆಗೆ ತುಂಬಿಸಿ ಬಿಡುತ್ತಿದ್ದರು. ಅದನ್ನೆಲ್ಲಾ ತೋರಿಸಲೆಂದೇ ನನಗೆ ವಿಶೇಷ ಆಹ್ವಾನ ಬರುತ್ತಿತ್ತು. ರಾಣಿಯಿಂದ ತಾಂಬೂಲಕ್ಕೆ ಆಹ್ವಾನ ಬಂದಿದೆ ಎಂದು ನಾನು ಬೀಗುತ್ತಾ  ಅರಮನೆ ತಲುಪುತ್ತಿದ್ದೆ. ಅರಮನೆಯ ಮುಖ್ಯ ದ್ವಾರದಲ್ಲಿ ತಲತಲಾಂತರದಿಂದ ರಾಜರಕ್ಷಕರ ವಂಶದ ಸೈನಿಕರುಗಳ ಗೌರವವನ್ನು ಸ್ವೀಕರಿಸಿ ಒಳಗೆ ಪ್ರವೇಶಿಸುತ್ತಿದ್ದೆ. ಎರಡನೇ ವರ್ತುಲದಲ್ಲಿ ಮೂರು ನಾಲ್ಕು ಹಿಜಡಾಗಳು ಕಾವಲಿಗಿರುತ್ತಿದ್ದರು. ನಾನು ಬಂದಿದ್ದೇನೆ ಎನ್ನುವ ವಿಷಯವನ್ನು ಅಂತಃಪುರದ ದಾಸಿಯರಿಗೆ ತಿಳಿಸುವುದು ಇವರ ಜವಾಬ್ದಾರಿ. ಅಂತಃಪುರದ ದ್ವಾರದಲ್ಲೇ ಚಿನ್ನಮ್ಮ ದೇವಿ ನನ್ನನ್ನು ಬರಮಾಡಿ ಕೊಳ್ಳುತ್ತಿದ್ದರು. ನಮ್ಮಿಬ್ಬರ ಮಾತುಕತೆಗಳು ನಿರಂತರ,ವಿಷಯವೇ ಬೇಡ. ಇಬ್ಬರಿಗೂ ತಾಂಬೂಲವೆಂದರೆ ತುಂಬ ಇಷ್ಟ. ಕೆಲವೊಮ್ಮೆ ಇತರೆ ರಾಣಿಯರೂ ತಾಂಬೂಲದ ನೆಪದಲ್ಲಿ ಬಂದು ಮಾತುಕಥೆಗೆ ಹಚ್ಚಿಕೊಳ್ಳುತ್ತಿದ್ದರು. ಅಂತಃಪುರದಿಂದ ಹೊರಗೆ ನಡೆಯುತ್ತಿದ್ದ ಹಾಗುಹೋಗುಗಳಿಗೆಲ್ಲಾ ರಾಯಭೇರಿ ನಾನೇ. ವಿಠ್ಠಲ ಮಂದಿರದ ಸಭಾಂಗಣದಲ್ಲಿ ನಡೆಯಲಿರುವ ನಮ್ಮ ತಂಡದ ನೃತ್ಯ ಸಮಾರಂಭಕ್ಕೆ ಆಹ್ವಾನ ಕೊಟ್ಟು ಅಲ್ಲಿಂದ ಮರುಳುತ್ತಿದ್ದೆ.

         ಚಿನ್ನಮ್ಮದೇವಿಯ ಆ ನಗುಮೊಗದಲ್ಲೂ ಸಣ್ಣಗೆ ನೋವಿನ ಗೆರೆಯೊಂದು ಆಗಾಗ ಕಾಣಿಸಿಕೊಳ್ಳುತ್ತಿತ್ತು,
ಸಂತಾನವಿಹೀನತೆ ಕಾಡುತ್ತಿತ್ತು... ಬರೀ ಅವರಿಗಷ್ಟೇ ಅಲ್ಲ ಇಡೀ ವಿಜಯನಗರ ಸಾಮ್ರಾ‌ಜ್ಯಕ್ಕೇ. ಇದೆಂತಹ ವಿಪರ್ಯಾಸ...ಕೃಷ್ಣದೇವರಾಯರಂತಹ ವೀರರು, ಧಾರ್ಮಿಕರು, ಮೇಧಾವಿಗಳು,ರಸಿಕರು, ಸಕಲ ಗುಣ ಸಂಪನ್ನರು....ಅವರ ವಂಶವೃಧ್ಧಿಸುವುದು ಪ್ರಕೃತಿಯ ನಿಯಮವಲ್ಲವೇ..ಆದರೆ ಹೀಗೇಕಾಗಲಿಲ್ಲ.

Comments

Popular posts from this blog

ದೂರದಿಂದ ಬಂದವರು

ಗೂಢಾಚಾರಿಕೆಯಿಂದ ಮುಕ್ತಿ ಯಾತ್ರೆಗೆ