ಗೂಢಾಚಾರಿಕೆಯಿಂದ ಮುಕ್ತಿ ಯಾತ್ರೆಗೆ
![]() |
| Gerusoppe |
ಕೃಷ್ಣದೇವರಾಯರು ತಮ್ಮ ಪರಿವಾರ ಮತ್ತು ಆಪ್ತರೊಂದಿಗೆ ಶರಾವತಿ ನದಿಯಲ್ಲಿ ದೋಣಿ ವಿಹಾರ, ಜಲಪಾತದ ವೀಕ್ಷಣೆ ಮತ್ತು ಬಸದಿಗಳಲ್ಲಿ ಪೂಜೆಗಳನ್ನೆಲ್ಲಾ ಮುಗಿಸಿ ವಿಷೇಶ ಅಥಿತಿಗೃಹಕ್ಕೆ ಮರಳುವಷ್ಟರಲ್ಲಿ ಗೇರುಸೊಪ್ಪದ ಮಂತ್ರಿಗಳಾಗಲೇ ರಾಯರು ಭೇಟಿ ಮಾಡುವವರ ಪಟ್ಟಿಯನ್ನು ಸಿದ್ದಪಡಿಸಿದ್ದರು.
ಕೆಳದಿಯ ಚೌಡಪ್ಪನಾಯಕ ತಮ್ಮ ಪುತ್ರ ಸದಾಶಿವನಾಯಕರೊಂದಿಗೆ ಬಂದಿದ್ದರು. ನಾನು ಸಂಗ್ರಹಿಸಿದ ಮಾಹಿತಿಯಲ್ಲಿ ಇವರ ವಿಷಯವೂ ತುಂಬಾ ಇತ್ತು. ಇವರಿಗೆ 'ನೀವು ಸದ್ಯಕ್ಕೆ ಗೇರುಸೊಪ್ಪದ ಕಡೆ ಕಣ್ಣುಹಾಯಿಸಬೇಡಿ' ಎಂದು ಬುದ್ದಿ ಹೇಳಬಹುದು ರಾಯರು.
ಬಾರ್ಕೂರಿನಿಂದ ತುಳುನಾಡಿನ ರಾಜ್ಯಪಾಲ ವಿಠರಸ ಒಡೆಯರೂ ಬಂದಿದ್ದರು. ಇವರು ಕೃಷ್ಣದೇವರಾಯರು ಮತ್ತು ಅವರ ಆಪ್ತರನ್ನು ತಮ್ಮ ನಾಡಿಗೆ ಕರೆದೊಯ್ಯಲು ಬಂದಿದ್ದು ಮೇಲುತೋರಿಕೆಯಷ್ಟೆ ಆದರೆ ಅಸಲಿಗೆ ವಿಷಯ ಸ್ವಲ್ಪ ಗಂಭೀರವೇ. ಪೋರ್ಚುಗೀಸರು ಆಗಲೇ ಬಾರ್ಕೂರಿನ ಮೇಲೂ ಕಣ್ಣು ಹಾಯಿಸಿದ್ದರು. ಅಲ್ಲಿಯ ಬಂದರನ್ನು ಉಪಯೋಗಿಸಿ ಕೊಳ್ಳಲು ಅನುಮತಿ ಕೇಳಿದ್ದರಂತೆ. ಅರಸರು ಅದನ್ನು ನಿರಾಕರಿಸಿದಾಗ ಬಂದರನ್ನು ಸುಟ್ಟುಹಾಕುತ್ತೇವೆ ಎಂದು ಹೆದರಿಸಿದರಂತೆ. ಓಹೋ ಈಗ ಅರಿವಾಯಿತು ಕ್ರಿಸ್ಟೊವೋ ಫಿಗ್ರಾಡೋ ಅವರ ಜೊತೆ ಬಂದಿರುವ ಪೋರ್ಚುಗೀಸು ಅಧಿಕಾರಿಗಳು ಯಾರೆಂದು. ಇವರು ಪೋರ್ಚುಗೀಸರ ಕಡೆಯಿಂದ ಸಂಧಾನಕ್ಕೆ ಬಂದ ಅಧಿಕಾರಿಗಳು. ಅಂತೂ ಇಲ್ಲಿಯ ಮೆಣಸು ಮತ್ತು ಬಂದರುಗಳ ಮೇಲೆ ಪೋರ್ಚುಗೀಸರ ಕಣ್ಣು.
ಅಂತಹ ಬಲಿಷ್ಟವಾದ ಕರ್ನಾಟಕ ಸಾಮ್ರಾಜ್ಯ ಪೋರ್ಚುಗೀಸರಿಗೆ ಯಾಕಿಷ್ಟು ಸಲಿಗೆಕೊಟ್ಟು ನಡೆಸಿಕೊಳ್ಳಬೇಕು ? ಅದೇ ನಮ್ಮಂತಹ ಜನಸಾಮಾನ್ಯರ ಯೋಚನೆ. ಆದರೆ ಸಾಮ್ರಾಜ್ಯಾಧಿಕಾರಿಯಾಗಿ ರಾಯರ ಆಲೋಚನೆಯ ಸ್ತರವೇ ಬೇರೆ. ಇನ್ನು ಎರಡು ಸಾವಿರ ಕುದುರೆಗಳು ಪೋರ್ಚುಗೀಸರ ಕಡೆಯಿಂದ ಬಂದರೆ ಸಾಕು, ಆಮೇಲಿನ ರಣತಂತ್ರವೇ ಬೇರೆ.... ಹೀಗೆಲ್ಲಾ ಯೋಚಿಸುತ್ತಿರುವಾಗ ಧಿಡಿಲ್ಲನೇ ಹಿಂದಿನ ರಾತ್ರಿಯ ಕನಸಿನ ನೆನಪಾಯಿತು...
ಕನಸಿನಲ್ಲಿ ಕೃಷ್ಣದೇವರಾಯರು ಮೆರವಣಿಗೆಯಲ್ಲಿ ರಾಜಠೀವಿಯಿಂದ ನಡೆದುಕೊಂಡು ಬರುತ್ತಿದ್ದಾರೆ.. ನೆರೆದಿದ್ದ ಜನರೆಲ್ಲಾ ಬಹುಪರಾಕಿನ ಘೋಷಣೆ ಮಾಡುತ್ತಿದ್ದಾರೆ.. ಇದ್ದಕ್ಕಿದ್ದಂತೆ ಹೊಗೆ..ದಟ್ಟವಾಗಿ ಹರಡಿಕೊಂಡು ಬಿಟ್ಟಿತು. ಮೆಣಸಿನ ಹೊಗೆ..ಯಾರೋ ಮೆಣಸಿನ ರಾಶಿಗೇ ಬೆಂಕಿಹಚ್ಚಿದ್ದಾರೆ...ಕೃಷ್ಣದೇವರಾ ಯರು ಕೂಗಿ ಹೇಳುತ್ತಿದ್ದಾರೆ..ಹೊಗೆಯಿಂದ, ಮೆಣಸಿನ ಹೊಗೆಯಿಂದ ರಕ್ಷಿಸಿಕೊಳ್ಳಿ, ಮೂಗು ಮುಚ್ಚಿಕೊಂಡು ಓಡಿಹೋಗಿ. ಯಾರೂ ಓಡುತ್ತಿಲ್ಲ, ಒಬ್ಬೊಬ್ಬರಾಗಿ ಎಲ್ಲಾ ಕುಸಿದು ಬೀಳುತ್ತಿದ್ದಾರೆ. ರಾಯರು ಒಬ್ಬೊಬ್ಬರನ್ನೇ ಎತ್ತಿ ನಿಲ್ಲಿಸಲು ಪ್ರಯತ್ನಿಸಿದರೂ ಫಲವಿಲ್ಲ, ಹತಾಶರಾಗಿ...ರಾಯರೂ ಕುಸಿದು ಬೀಳುತ್ತಾರೆ..
ಮೆಣಸು...ಹೊಗೆ...ಸರ್ವನಾಶ...
ಇನ್ನೊಮ್ಮೆ ಮೈಜಾಲಿಸಿಕೊಂಡೆ, ಅಬ್ಬಾ ಇದೆಂತಹ ದುಃಸ್ವಪ್ನ...
'ಕಲ್ಲು ಮಾಸ್ತಿ ಇನ್ನು ಸ್ವಲ್ಪ ಹೊತ್ತಿನಲ್ಲಿ ನೀವು ರಾಯರನ್ನು ಭೇಟಿಮಾಡಬಹುದು' ಸೇನಾಧಿಕಾರಿಯ ಸಹಾಯಕ ಬಂದು ತಿಳಿಸಿದ ನಂತರ ನಿಧಾನವಾಗಿ ವಾಸ್ತವಕ್ಕೆ ಮರಳಿದೆ.
ಅಂತೂ ಆ ಕ್ಷಣ ಬಂದೇಬಿಟ್ಟಿತು..ರಾಯರನ್ನು ನೇರವಾಗಿ ಭೇಟಮಾಡಲು. ನಾನು ಗೂಢಾಚಾರ ವರದಿಯೊಂದಿಗೆ ಬಂದಿರುವುದನ್ನು ರಾಯರಿಗೆ ತಿಳಿಸಿದ್ದರಿಂದ ಯಾರೂ ಇರಬಾರದೆಂದು ಆಜ್ಞಾಪಿಸಿರಬಹುದು. ರಾಯರೊಬ್ಬರೇ ಕುಳಿತಿದ್ದರು. ಸ್ವಲ್ಪ ಬಳಲಿದಂತೆ ಕಾಣಿಸಿತು, ನಾನು ಶಿರಸಾವಹಿಸಿ ವಂದಿಸಿ ನನ್ನ ಪರಿಚಯ ಮಾಡಿಕೊಂಡೆ.
' ಓ ಕಲ್ಲುಮಾಸ್ತಿ..? ತಿಮ್ಮರಸರು ಹೇಳಿದ್ದರು ನಿನ್ನ ಗೂಢಾಚಾರಿಕೆಯ ಬಗ್ಗೆ, ಕುಸ್ತಿ ಆಡುವುದನ್ನು ಬಿಟ್ಟೆ ಬಿಟ್ಟೆಯೋ? '
ಕುಸ್ತಿಪಟುಗಳು ಎಂದರೆ ಅಷ್ಟು ಆಸಕ್ತಿ, ಕುಸ್ತಿಯ ವಿಚಾರ ಬರುತ್ತಲೇ ಸ್ವಲ್ಪ ಮಂದಹಾಸ ಮುಖದಲ್ಲಿ.
ಸಕಲೇಶಪುರದ ಆಸುಪಾಸಿನಲ್ಲಿ ನಡೆಯುತ್ತಿರುವ ವಹಿವಾಟುಗಳ ಬಗ್ಗೆ, ಹೆತ್ತೂರಿನಲ್ಲಿ ನಡೆದ ಘಟನೆಯ ಬಗ್ಗೆ, ವಜ್ರಗಳ ಕಳ್ಳಸಾಗಣೆಕೆಯ ಬಗ್ಗೆ ಒಂದೂ ಬಿಡದೆ ನಾನು ಇಷ್ಟು ದಿನ ಸಂಗ್ರಹಿಸಿದ ವಿಷಯಗಳನ್ನೆಲ್ಲಾ ಹೇಳತೊಡಗಿದೆ. ರಾಯರೂ ಗಮನವಿಟ್ಟು ಕೇಳಿಸಿಕೊಂಡರು. ಮಧ್ಯ ಮಧ್ಯ ಕೆಲವು ಸಲ ಕಣ್ಣು ಮುಚ್ಚಿಕೊಂಡು ಮನಸ್ಸಿನಲ್ಲೇನೋ ಲೆಕ್ಕಾಚಾರ ಮಾಡುತ್ತಿದ್ದರು.
'ಇದರ ಹಿಂದೆ ಯಾರಿರಬಹುದು ನಿನ್ನ ಅನಿಸಿಕೆ ಅಥವಾ ಜನ ಹೇಗೆ ಮಾತಾಡಿಕೊಳ್ಳುತ್ತಿದ್ದಾರೆ?
ಎಂದು ಕೇಳಿದ್ದಕ್ಕೆ ತಿಮ್ಮಯ್ಯನವರ ಹೆಸರಿಡಿಯದೆ
ಇದೆಲ್ಲಾ ಭಟ್ಕಳದಿಂದ ನಡೆಯುವ ಚಟುವಟಿಕೆಗಳು ಎಂದಷ್ಟೇ ಹೇಳಿದೆ.
ರಾಯರು ಇನ್ನೂ ಸ್ವಲ್ಪ ಹೊತ್ತು ಕಣ್ಣು ಮುಚ್ಚಿಕೊಂಡು ಆಲೋಚಿಸಿ, ಒಂದು ನಿರ್ಧಾರಕ್ಕೆ ಬಂದಂತೆ ಅವಡುಗಚ್ಚಿದರು. ಕಣ್ಣು ತೆರೆದು, ಸರಿ ನೀನಿನ್ನು ಹೊರಡಬಹುದು ಎಂದರು. ಇನ್ನೊಮ್ಮೆ ಬಾಗಿ ವಂದಿಸಿ, ಹೊರಟೆ.
ಮನಸ್ಸಿನಲ್ಲಿ ಸಣ್ಣ ನಿರಾಸೆ. ನನ್ನದೊಂದು ಕೋರಿಕೆಯನ್ನು ಕೇಳಲು ಅವಕಾಶವೇ ಸಿಗಲಿಲ್ಲವಲ್ಲಾ..
'ಕಲ್ಲುಮಾಸ್ತಿ ಬಾ ಇಲ್ಲಿ'
ಮತ್ತೆ ರಾಯರ ಹತ್ತಿರ ಬಂದೆ.
'ನಿನಗೇನಾದರೂ ಕೇಳುವುದಿದೆಯೇ?'
ಹೇಗೆ ನನ್ನ ಮನದಾಳದ ಮಾತು ಇವರಿಗೆ ತಿಳಿಯಿತು..?
ಸರಿ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೇಳೇಬಿಟ್ಟೆ
'ನೀವು ನಮ್ಮಣ್ಣ ಮಲ್ಲುಮಾಸ್ತಿಗೆ ದಸರಾ ಮಹೋತ್ಸವದ ಸಮಾರಂಭದಲ್ಲಿ ತಾಮ್ರದ ಪ್ರಶಂಸಾ ಪತ್ರ ದಯಪಾಲಿಸಿದ್ದಿರಿ'
'ಹೌದೇ..ಏನು ಅಂತಹ ಮಹತ್ಕಾರ್ಯ ಮಾಡಿದ್ದ ನಿಮ್ಮಣ್ಣ?'
ಆಗ ಸ್ವಲ್ಪ ವಿಸ್ತಾರವಾದ ವಿವರಣೆ ಕೊಡಬೇಕಾಯಿತು.
ನಮ್ಮೂರಿನ ಕುಸ್ತಿಪಂದ್ಯಗಳಲ್ಲಿ ನಾವು ಮಾಸ್ತಿ ಕುಲದವರೇ ಯಾವಾಗಲೂ ಗೆಲ್ಲೋದು. ಇದರಿಂದ ಊರಿನ ಇತರೆ ಕುಸ್ತಿಪಟುಗಳು ಕುದ್ದು ಹೋಗುತ್ತಿದ್ದರು. ಏನಾದರೂ ಮಾಡಿ ನಮ್ಮ ಕುಲದವರನ್ನು ಯಾರಾದರೂ ಒಬ್ಬರನ್ನು ಸೋಲಿಸಲೇ ಬೇಕೆಂದು ಕಾಯುತ್ತಿದ್ದರು. ನಮ್ಮಣ್ಣ ಮಲ್ಲುಮಾಸ್ತಿ ನೋಡಲು ಸ್ವಲ್ಪ ಸಣಕಲು. ಅವನನ್ನು ಅಪಹಾಸ್ಯ ಮಾಡಲು ಶುರುಮಾಡಿದರು.
'ನೀನು ಕುಸ್ತಿಯಲ್ಲಿ ನಮ್ಮನ್ನೆಲ್ಲಾ ಸೋಲಿಸಿದರೆ ನಮ್ಮ ಊರಿನ ಯಾವ ಹೆಂಗಸರು ಬೇಕೋ ಅವರನ್ನು ಪಡೆಯಬಹುದು' ಎನ್ನುವ ಉಡಾಫೆಯ ಸವಾಲು ಹಾಕಿದ್ದರು. ಸರಿ ಮಲ್ಲುಮಾಸ್ತಿ ಪಂದ್ಯದಲ್ಲಿ ಒಬ್ಬೊಬ್ಬರನ್ನೇ ಸೋಲಿಸತೊಡಗಿದ.
ಆಗ ಊರವರಲ್ಲಿ ನಡುಕ ಶುರುವಾಯಿತು. ಎಲ್ಲರೂ ಸೋತು ಅವಮಾದಿಂದ ತಲೆತಗ್ಗಿಸಿದರು. ಆಗ ನಮ್ಮಣ್ಣನೇ
'ನಿಮ್ಮ ಹೆಂಗಸರ್ಯಾರು ಬ್ಯಾಡ..ನನಗೆ ಕೃಷ್ಣದೇವರಾಯರ ಕೈಯಿಂದ ಒಂದು ಪ್ರಶಸ್ತಿ ಪತ್ರ ಕೊಡಿಸಿ ಸಾಕು' ಎಂದ. ತಿಮ್ಮರಸರ ಮಧ್ಯಸ್ತಿಕೆಯಿಂದ ಅವನ ಆಸೆ ಈಡೇರಿಸಿದಿರಿ....
ಇಷ್ಟೆಲ್ಲಾ ಕೇಳಿಸಿಕೊಂಡ ರಾಯರು ಜೋರಾಗಿ ನಗಲು ಶುರುಮಾಡಿದರು. ಅಲ್ಲಿವರೆಗೂ ಗಂಭೀರವಾದ ವಾತಾವರಣ ನಗೆಗಡಲಲ್ಲಿ ಮುಳುಗಿಹೋಯಿತು. ಪಕ್ಕದ ಕೋಣೆಯಲ್ಲಿದ್ದ ರಾಣಿಯರೂ ಬಂದರು. ಹೊಟ್ಟೆಹಿಡಿದುಕೊಂಡು ನಗುತ್ತಿದ್ದ ಕೃಷ್ಣದೇವರಾಯರನ್ನು ನೋಡಿ
' ಏನದು ಹಾಸ್ಯ ನಮಗೂ ಹೇಳಿ' ಎಂದಿದ್ದಕ್ಕೆ ರಾಯರು ನಗುತ್ತಲೇ ನಾನು ಹೇಳಿದ ಪಂದ್ಯದ ಬಗ್ಗೆ ಅವರಿಗೆ ಹೇಳಿ ಅವರನ್ನೂ ನಗೆಯಲ್ಲಿ ಶಾಮೀಲು ಮಾಡಿಕೊಂಡರು.
ರಾಣಿಯರೊಂದಿಗೆ ಬೆಳಗ್ಗೆ ರಾಯರ ಆಗಮನದ ಸಮಯದಲ್ಲಿ ಬಿಳಿ ಕುದುರೆಯ ಮೇಲೆ ಆ ಸುಂದರವಾದ ಬಾಲಕಿಯೂ ಇದ್ದರು. ಈ ವಯಸ್ಸಿಗೇ ಅದೇನು ಗಾಂಭೀರ್ಯ. ಇದೇ ನಾಡಿನ ಕೃಷ್ಣದೇವರಾಯರ ತಾಯಿ ನಾಗಲಾಂಬೆಯವರ ಸಾಹಸ, ಸೌಂದರ್ಯ ಇಲ್ಲಿ ಮನೆಮಾತಾಗಿತ್ತಂತೆ. ಈಗ ಈ ಹೆಣ್ಣು ಮಗುವಿನ ಸಾಹಸಗಾಥೆಗಳು ಅಷ್ಟೇ ಪ್ರಸಿದ್ಧಿ ಯಂತೆ. ಅದಕ್ಕೇ ರಾಯರು ಅಷ್ಟೊಂದು ಭಾವುಕರಾಗಿದ್ದು...ಅವರ ತಾಯಿಯ ನೆನಪು ಬಂದಿರಬಹುದು.
ಈಗ ಗೊತ್ತಾಯಿತು ಇವರು ಗೇರುಸೊಪ್ಪದ ರಾಜರ ಮೊಮ್ಮಗಳು ಚಿನ್ನಭೈರಾದೇವಿ ಎಂದು. ಅವರನ್ನು ನೋಡುತ್ತಾ ಮೈಮರೆತಿರುವುದನ್ನು ನೋಡಿ ಕೃಷ್ಣದೇವರಾಯರು ಎಚ್ಚರಿಸುವಂತೆ,
'ಸರಿ ಈಗೇನು ನಿನಗೂ ಪ್ರಶಸ್ತಿ ಪತ್ರ ಬೇಕೇ?’
'ಬೇಡ ಪ್ರಭು, ಆ ನಮ್ಮಣ್ಣ ಎರಡು ಸಲ ನಿಮ್ಮ ತಿರುಪತಿಯ ತೀರ್ಥಯಾತ್ರೆಯಲ್ಲಿ ನಿಮ್ಮ ಜೊತೆ ರಕ್ಷಣಾ ಪಡೆಯಲ್ಲಿ ಪ್ರಯಾಣಿಸಿದ್ದಾನೆ, ಅಂತಹದೊಂದು ಅವಕಾಶ ಈ ನಿಮ್ಮ ಸಪ್ತಮುಕ್ತಿ ಕೇಂದ್ರಗಳ ಯಾತ್ರೆಯಲ್ಲಿ ನಿಮ್ಮ ರಕ್ಷಣಾ ಪಡೆಯಲ್ಲಿ ಸೇರಿಸಿಕೊಳ್ಳಿ'
ನಗುವನ್ನು ಸ್ವಲ್ಪ ಹೊತ್ತು ನಿಲ್ಲಿಸಿ
' ಓ ಅದಾ ಕೋರಿಕೆ..ಆದರೆ ತಿಮ್ಮರಸರು ನಿನಗೆ ಕೊಟ್ಟ ಜವಾಬ್ದಾರಿಗೆ ಸ್ವಲ್ಪ ದಿನಗಳ ವಿಶ್ರಾಂತಿಯೇ..ಹಾಗೇ ಆಗಲಿ ಬಾ ನಮ್ಮ ಜೊತೆ' ಎಂದವರೇ ರಕ್ಷಣಾ ಪಡೆಯ ಮುಖ್ಯಾಧಿಕಾರಿಯನ್ನು ಕರೆದು ಸೂಕ್ತ ಆದೇಶಗಳನ್ನಿತ್ತರು.
ನಾನು ಇನ್ನೊಮ್ಮೆ ಶಿರಸಾವಹಿಸಿ ವಂದಿಸಿ ಮುಗುಳುನಗೆಯೊಂದಿಗೆ ಹೊರಬಂದೆ...ಗೂಢಾಚಾರಿಕೆಯಿಂದ ಮುಕ್ತಿಕೇಂದ್ರಗಳ ಕಡೆಗೆ…
ಸಪ್ತಮುಕ್ತಿ ಯಾತ್ರೆ
ವಿಜಯನಗರದಲ್ಲಿ ಶ್ರಿ ಕೃಷ್ಣಜನ್ಮಾಷ್ಟಮಿಯನ್ನು ಬಹಳ ವಿಷೇಶವಾಗಿ ಆಚರಿಸಲಾಗುತ್ತದೆ. ಕೃಷ್ಣದೇವರಾಯರ ಪಟ್ಟಾಭಿಷೇಕವೂ ಅದೇ ಕೃಷ್ಣಾಷ್ಟಮಿಯಂದು ನಡೆದಿದ್ದರಿಂದ ಪ್ರತಿವರ್ಷವೂ ಅದರ ವಾರ್ಷಿಕೋತ್ಸವದ ಮೆರಗೂ ಹಬ್ಬಕ್ಕೆ ಸೇರಿಕೊಂಡು ಹಂಪೆಯಲ್ಲಿ ದಸರ ಮಹೋತ್ಸವದ ನಂತರ ಇದೇ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವ ಹಬ್ಬ ಎನಿಸಿಕೊಳ್ಳುತ್ತಿದೆ.
ಈ ಸಲದ ಕೃಷ್ಣಾಷ್ಟಮಿಯನ್ನು ರಾಯರು ತಮ್ಮ ರಾಣಿಯರೊಂದಿಗೆ ಉಡುಪಿಯ ಶ್ರೀಕೃಷ್ಣನ ದೇವಾಲಯದಲ್ಲಿ ಆಚರಿಸುವಂತೆ ಒಂದು ಕಾರ್ಯಕ್ರಮದ ನಿರ್ದಿಷ್ಟತೆಯನ್ನಿಟ್ಟುಕೊಂಡು ಅವರ ಸಪ್ತಮುಕ್ತಿ ಯಾತ್ರೆಯನ್ನು ಹೆಣೆಯಲಾಗಿತ್ತು.
ನಾನು ಈ ಯಾತ್ರೆಯಲ್ಲಿ ಗೂಢಾಚಾರಿ ಕಲ್ಲುಮಾಸ್ತಿಯಾಗಿರದೆ, ರಕ್ಷಣಾಪಡೆಗೆ ಸೇರಿದ ಸಿಬ್ಬಂದಿ ಈಗ. ರಾಯರ ನೇರ ಆದೇಶದಿಂದ ಸೇರಿಕೊಂಡ ನನಗೆ ಪ್ರವಾಸದ ಹಿನ್ನಲೆ ಮತ್ತು ವಿವರಗಳನ್ನು ಪ್ರತ್ಯೇಕವಾಗಿ ತಂಡದ ಮುಖ್ಯ ಸೇನಾಧಿಕಾರಿಯಗಳು ತಿಳಿಸಿದರು. ಅದರಂತೆ ಪ್ರವಾಸದ ಕೆಲವು ಭಾಗದಲ್ಲಿ ಹಡಗಿನಲ್ಲಿ ಪ್ರಯಾಣವಿದ್ದುದರಿಂದ ರಕ್ಷಣಾಪಡೆಗಳನ್ನು ಎರಡು ಭಾಗಗಳಾಗಿ ವಿಭಜಿಸಲಾಗಿತ್ತು. ಒಂದು ಭಾಗ 'ಧ್ವಜ ನೌಕೆ' ಯಲ್ಲಿ ಇನ್ನೊಂದು ಭಾಗ ಭೂಮಾರ್ಗದ ತುಕಡಿಯಲ್ಲಿ.
ಈ ಧ್ವಜ ನೌಕೆ ವಿಜಯನಗರದ ಲಾಂಛನಧಾರಿಯಾಗಿ ರಾಜನೌಕೆಯ ಮುಂದೆ ಸಾಗುತ್ತದೆ. ಇದರಲ್ಲಿ ಕೆಲವು ಸೈನಿಕರು ಮತ್ತು ನಾವಿಕರು ಅಷ್ಟೆ ಇರುವುದು. "ನಾಗಲಾಂಬೆ" ಎನ್ನುವ ರಾಜನೌಕೆಯಲ್ಲಿ ರಾಜ ಪರಿವಾರ ಪ್ರಯಾಣಿಸುವುದು. ಅದರಲ್ಲಿ ಸೇನಾಧಿಕಾರಿ ಮಾತ್ರ ಪ್ರಯಾಣಿಸುವುದು. ಇನ್ನೊಂದು ಭಾಗದ ಸೈನಿಕರು ಭೂಮಾರ್ಗದಲ್ಲಿ, ಹಡಗುಗಳು ಮುಂದಿನ ಬಂದರು ತಲುಪುವಷ್ಟರಲ್ಲಿ ಎಲ್ಲಾ ಕುದುರೆಗಳು, ರಥಗಳು ಮತ್ತಿತರ ಸರಂಜಾಮುಗಳಳೊಂದಿಗೆ ಮುಂದಿನ ಬಂದರನ್ನು ತಲುಪಿ ಹಡಗಿನ ಆಗಮನಕ್ಕಾಗಿ ಕಾಯಬೇಕು.
ದೇವಸ್ಥಾನಗಳಿಗೆ ಕೊಡುಗೆ ನೀಡುವ ಆಭರಣಗಳ, ಚಿನ್ನದ ವರಾಹಗಳ ಪೆಟ್ಟಿಗೆಯನ್ನು ರಕ್ಷಿಸುವ ಪಡೆಗೆ ನನ್ನನ್ನು ನಿಯಮಿಸಲಾಗಿತ್ತು. ಇದು ರಾಜಪಡೆಯ ಅಂಗವಾದ್ದರಿಂದ ಭೂಸಂಚಾರವಾಗಲೀ, ಜಲಸಂಚಾರವಾಗಲೀ ನಾನು ರಾಜಪಡೆಯ ಜೊತೆಗೇ ಇರುವಂತಹ ಸೌಭಾಗ್ಯ ನನಗೆ ದೊರಕಿದ್ದರಿಂದ ಬಹಳ ಆನಂದವಾಯಿತು.
ಕೃಷ್ಣದೇವರಾಯರ ತಾಯಿ ನಾಗಲಾದೇವಿಯವರ ಹೆಸರಿನ ಈ ರಾಜನೌಕೆಯನ್ನು 'ತೇಲಾಡುವ ಅರಮನೆ' ಎಂದು ಕರೆಯುತ್ತಿದ್ದರು ಅದನ್ನು ನೋಡಿದವರು. ಮೊದಲ ಸಲ ಹೊನ್ನಾವರದ ಬಂದರಿನಲ್ಲಿ ನಿಂತಿದ್ದ ಈ ಹಡಗನ್ನು ನೋಡಿದಾಗ ನನಗೂ ಆ ವಿವರಣೆ ಸರಿ ಎನಿಸಿತು. ಅದೆಂತಹ ಅಧ್ಭುತ ಶಿಲ್ಪಿಗಳಿದ್ದಾರೆ ನಮ್ಮ ಸಾಮ್ರಾಜ್ಯದಲ್ಲಿ ಎನಿಸಿತು. ಅಷ್ಟು ಸುಂದರವಾಗಿ ನಿರ್ಮಿಸಿದ್ದರು.
ಭೋಜ ನರಪತಿ ಎನ್ನುವ ನಾವಿಕ, ವಿದ್ವಾಂಸರು ಆರನೇ ಶತಮಾನದಲ್ಲಿ ರಚಿಸಿದ "ಯುಕ್ತಿ ಕಲ್ಪತರು" ಎನ್ನುವ ಸಂಸ್ಕೃತ ಗ್ರಂಥವೇ ಈಗಲೂ ಹಡಗಿನ ನಿರ್ಮಾಣಕ್ಕಿರುವ ಮೂಲಗ್ರಂಥವಂತೆ.
ನೌಕೆಯ ದಿಕ್ಸೂಚಿ, ಮತ್ಸ್ಯಯಂತ್ರ, ಆಗಿನಕಾಲದಲ್ಲೇ ಇವುಗಳನ್ನು ಅಳವಡಿಸಿಕೊಂಡ ನೌಕೆಗಳು ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದವಂತೆ.
ಸೈನ್ಯಕ್ಕೆಂದೇ ಕಟ್ಟಿದ ಯುಧ್ಧ ನೌಕೆಗಳನ್ನು 'ಅಗ್ರನೌಕೆ' ಎಂದರೆ, 'ಮಧ್ಯಮಾರ ಮಂದಿರ' ನೌಕೆಗಳನ್ನು ಮೋಜಿನ ಪ್ರವಾಸಕ್ಕೆಂದೇ ಕಟ್ಟುತ್ತಿದ್ದರಂತೆ.
ಕೃಷ್ಣದೇವರಾಯರ ಪರಿವಾರದವರಿಗೇ ಈ ವಿಶೇಷ ಹಡಗನ್ನು ಕಟ್ಟುವಾಗ ಹಂಪೆಯ ದೇವಸ್ಥಾನಗಳ ಶಿಲ್ಪಿಗಳೊಂದಿಗೆ ಇದರ ವಿನ್ಯಾಸದ ಬಗ್ಗೆ ಚರ್ಚಿಸಲಾಗಿತ್ತಂತೆ, ಏಕೆಂದರೆ ಇದರೊಳಗೆ ಒಂದು ದೇವಸ್ಥಾನವನ್ನೂ ಅಳವಡಿಸಲಾಗಿದೆ!
"ವಿಷ್ಣುಧರ್ಮೋತ್ತರ" ಎನ್ನುವ ಇನ್ನೊಂದು ಗ್ರಂಥದಲ್ಲಿ ವಿವಿಧ ರೀತಿಯ ದೇವಸ್ಥಾನ ನಿರ್ಮಾಣಗಳಲ್ಲಿ ಈ ತರಹದ ನೌಕೆಗಳ ಮೇಲೆ ದೇವಾಲಯವನ್ನು ಕಟ್ಟುವ ಒಂದು ರೀತಿಯೂ ಇದೆಯಂತೆ. ಇವೆರಡೂ ಗ್ರಂಥಗಳ ತತ್ವಗಳ ಸಮ್ಮಿಲನವೇ ಈ ವಿಷೇಶ ನೌಕೆ..."ನಾಗಲಾಂಬಿಕೆ"
ಇಲ್ಲಿ ಕೃಷ್ಣದೇವರಾಯರ ಅಂತಃಪುರವನ್ನೇ ಗರ್ಭಗುಡಿಯ ಸ್ಥಾನದಂತೆ ನಿರ್ಮಿಸಲಾಗಿದೆ. ಹೌದಲ್ಲವೇ ಮತ್ತೆ ಧರ್ಮವೇ ಮೂರ್ತಿವೆತ್ತ ರಾಯರು ದೇವರಿಗೆ ಸಮ. ಅದರ ಮೇಲೆ ಗೋಪುರ, ಸುತ್ತಲೂ ಪರಿಕ್ರಮ, ಅದರ ಹೊರಗೆ ಮಂಟಪ. ಇನ್ನೂ ಬೆರಗುಗೊಳಿಸಿದ್ದು ಎಂದರೆ ಅಲ್ಲೇ ಚಿಕ್ಕದೊಂದು ಪುಷ್ಕರಣಿ. ಹೋಮ ಹವನಗಳಿಗೂ ಏರ್ಪಾಡು ಮಾಡಿದ್ದರು. ದಾಸಶ್ರೇಷ್ಟರಿಗೆಂದೇ ವಿಷೇಶ ಕೊಟಡಿಗಳು. ಗಾನಸಭೆಗೆಂದು ಒಂದು ಸಭಾಂಗಣ. ಇನ್ನುಳಿದಂತೆ ಭೋಜನಶಾಲೆ ಮತ್ತು ಪಾಕಶಾಲೆ. ಅಧ್ಭುತ...ಇದನ್ನು ತೇಲುವ ದೇವಸ್ಥಾನ ಎನ್ನಲೂ ಬಹುದು.
ಹೊನ್ನಾವರದಿಂದ ಗೋಕರ್ಣಕ್ಕೆ ಮೊದಲ ಹಂತದ ಪ್ರಯಾಣ. ಹವಾಮಾನ ವೈಪರೀತ್ಯ ಅಥವಾ ನೌಕಾಯಾನದಲ್ಲಿ ಯಾರಾದರೂ ಅಸ್ವಸ್ಥರಾದರೆ ಅದಕ್ಕೆಂದೇ ಭೂಮಾರ್ಗದ ಪರ್ಯಾಯ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕೃಷ್ಣಾಷ್ಟಮಿಯಂದು ಉಡುಪಿಯಲ್ಲಿ ಪರ್ಯಾಯಗೊಳ್ಳಬೇಕೆಂಬ ಅಂಶವೊಂದನ್ನು ಬಿಟ್ಟರೆ ಈ ಯಾತ್ರೆಯ ನಿರ್ದಿಷ್ಟ ಕಾರ್ಯಕ್ರಮದ ನಿರೂಪಣೆ ಏನೂ ಇರಲಿಲ್ಲ. ಒಟ್ಟಾರೆ ಸಪ್ತಮುಕ್ತಿ ಕೇಂದ್ರಗಳಾದ ಗೋಕರ್ಣ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ, ಸುಬ್ರಹ್ಮಣ್ಯ, ಕೊಲ್ಲೂರು ಮತ್ತು ಉಡುಪಿ ಇವುಗಳ ಯಾತ್ರೆಯ ಜೊತೆ ರಾಯರಿಗೆ, ರಾಣಿಯರಿಗೆ ಪ್ರಿಯವಾದ ಸ್ಥಳಗಳಿಗೆ ಭೇಟಿಕೊಡುವುದು.
ವಿಜಯನಗರ ಸಾಮ್ರಾಜ್ಯದಲ್ಲಿ ಸಣ್ಣಪುಟ್ಟ ಬಂದರುಗಳನ್ನೆಲ್ಲಾ ಸೇರಿಸಿದರೆ ಸುಮಾರು ಇನ್ನೂರಕ್ಕೂ ಹೆಚ್ಚು ಬಂದರುಗಳಿವೆಯಂತೆ. ಈ ಜಲಮಾರ್ಗದಲ್ಲಿ ಬರುವ ಎಲ್ಲಾ ಬಂದರುಗಳ ಹತ್ತಿರದಿಂದ ನಿಧಾನವಾಗಿ ಹಾದು ಹೋಗುವಂತೆ ಆದೇಶವಿತ್ತು. ಧ್ವಜನೌಕೆಯಲ್ಲಿದ್ದ ಮೂರು ಜನ ಕಹಳೆಯನ್ನು ಊದಿ ಬಂದರಿನಲ್ಲಿದ್ದವರಿಗೆ ರಾಜನೌಕೆಯ ಆಗಮನವನ್ನು ತಿಳಿಸುತ್ತಿದ್ದರು. ಆಗ ಆಸುಪಾಸಿನ ಹಡಗುಗಳಲ್ಲಿದ್ದ ಜನಗಳು, ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳು ಸಾಲಾಗಿನಿಂತು ರಾಜನೌಕೆಯ ಮಂಚೂಣಿಯ ಅಟ್ಟದ ಮೇಲೆ ನಿಂತಿದ್ದ ಕೃಷ್ಣದೇವರಾಯರು ಮತ್ತು ರಾಣಿಯವರಿಗೆ ನಮಸ್ಕರಿಸಿ ಕೈಬೀಸಿ
' ಶ್ರೀಕೃಷ್ಣದೇವರಾಯರಿಗೆ..ಜಯವಾಗಲಿ' ಎಂದು ಜಯಕಾರ ಹಾಕುತ್ತಿದ್ದರು. ನಿಧಾನವಾಗಿ ಚಲಿಸುತ್ತಿದ್ದ ಹಡಗು ಕಣ್ಮರೆಯಾಗುವವರೆಗೂ ಕೈಬೀಸುತ್ತಲೇ ಇರುತ್ತಿದ್ದರು.
ಸಾಯಂಕಾಲಕ್ಕೆ ತಡದಿಯ ಬಂದಿರಿನ ಸಮೀಪ ಹಡಗನ್ನು ನಿಲ್ಲಿಸಲಾಯಿತು. ಬೆಳದಿಂಗಳು ಎಲ್ಲೇಲ್ಲೂ ಹಾಲುಚೆಲ್ಲಿದಂತೆ, ಪ್ರಶಾಂತವಾದ ಸಮುದ್ರ, ಅಲ್ಲೂ ಚಂದಿರನ ಪ್ರತಿಬಿಂಬ ಕಂಡು ಯಾವುದು ಆಕಾಶ, ಯಾವುದು ಅಂಬುಧಿ ಎನ್ನುವ ಗೊಂದಲ...ಸೃಷ್ಟಿಸುವಂತಹ ನೋಟ. ಅದೊಂದು ಅಧ್ಭುತ ಗಾನಸಭೆಗೆಂದು ಹೇಳಿಮಾಡಿಸಿದ ಆವರಣ.
ಆರಂಭವಾಗೇ ಬಿಟ್ಟಿತು ಪುರಂದರದಾಸರ
'ಧರ್ಮವೇ ಜಯವೆಂಬ ದಿವ್ಯ ಮಂತ್ರ
ಮರ್ಮವನರಿತು ಮಾಡಲು ಬೇಕು ತಂತ್ರ...'
ಹೀಗೆ ನಿರಂತರವಾಗಿ ಗಾನಸುಧೆ ಹರಿದು ಬಂತು.
ಪರುಶುರಾಮನ ಪ್ರದೇಶದಲ್ಲಿ
ರಾತ್ರಿಯ ನೀರವತೆಯಲ್ಲಿ ಪಕ್ಕದಲ್ಲೇ ಯಾರೋ ಬಾಗಿಲು ತೆಗೆದ ಶಬ್ದ ಕೇಳಿ ಫಕ್ಕನೆ ಎಚ್ಚರವಾಯಿತು. ಟೊಂಕಕ್ಕೆ ಕಟ್ಟಿಕೊಂಡಿದ್ದ ರಾಜ ಪಿಟಾರಿಯ ಬೀಗದ ಕೀಲಿ ಇರುವುದನ್ನು ಖಾತರಿ ಪಡಿಸಿಕೊಂಡು, ಈ ನಡುರಾತ್ರಿಯಲ್ಲಿ ಯಾರು ಎದ್ದಿರಬಹುದು ಎಂದು ನೋಡಲು ಹೊರಗೆದ್ದು ಬಂದೆ.
ವ್ಯಾಸತೀರ್ಥರು ನೌಕೆಯ ಮೇಲ್ಛಾವಣಿಯಲ್ಲಿ ಸಮುದ್ರವನ್ನು ದಿಟ್ಟಿಸಿ ನೋಡುತ್ತಾ ನಿಂತಿದ್ದರು. ನನ್ನ ನಡಿಗೆಯ ಸದ್ದಿನಿಂದ ಹಿಂತಿರಿಗಿ ನೋಡಿ
' ಓ..ಏನು ಕಲ್ಲುಮಾಸ್ತಿಗೂ ನಿದ್ದೆ ಬರುತ್ತಿಲ್ಲವೇ?'
ಎಂದು ಕೇಳಿದರು.
' ಹಾಗೇನಿಲ್ಲ ಸ್ವಾಮಿಗಳೇ..ಮಧ್ಯ ಮಧ್ಯ ರಾಜ ಪಿಟಾರಿಯನ್ನು ನೋಡಲು ಎದ್ದು ಬರುತ್ತೇನೆ' ಎಂದೆ.
ಇನ್ನೂ ಸ್ವಲ್ಪ ಹೊತ್ತು ಸಮುದ್ರವನ್ನೇ ನೋಡುತ್ತಾ..
' ಕಾಶ್ಮೀರಕ್ಕೆ ಸೂಕ್ತ ಹೆಸರಿಟ್ಟಹಾಗೆ ಈ ಪ್ರದೇಶಕ್ಕೂ ಸೂಕ್ತ ಹೆಸರಿಡಬೇಕಿತ್ತು ಎಂದರು.
ಕಾಶ್ಮೀರದ ಹೆಸರು ಸೂಕ್ತವೇ ಅದು ಹೇಗೆ ಎಂದು ಕೇಳಿದ್ದಕ್ಕೆ ವಿವರಣೆ ನೀಡುತ್ತಾ ಹೇಳಿದರು..
'ಸಪ್ತ ಋಷಿಗಳಲ್ಲಿ ಒಬ್ಬರಾದ ಕಶ್ಯಪರು ಸತಿಸರ ಎನ್ನುವ ಸರೋವರವನ್ನು ಬರಿದುಮಾಡಿ ಅಲ್ಲಿ ವೇದ ವ್ಯಾಸಂಗಕ್ಕೆಂತಲೇ ಒಂದು ವಿಶೇಷ ನಗರವನ್ನು ನಿರ್ಮಿಸಿದರು, ನಗರಕ್ಕೆ ಸಂಸ್ಕೃತ ಭಾಷೆಯಲ್ಲಿ ಮೈರಾ ಎನ್ನುತ್ತಾರೆ... ಕಶ್ಯಪರ ಮೈರಾ..'ಕಾಶ್ಮೀರ' ಅಗಾಧವಾಗಿ ಬೆಳೆಯತೊಡಗಿತು. ಭಾರತದ ಅತಿದೊಡ್ಡ ವೇದ ಮತ್ತು ಉಪನಿಷತ್ತುಗಳ ಮಹಾಗ್ರಂಥಾಲಯವೇ ಅಲ್ಲಿ ಸ್ಥಾಪಿತವಾಗಿತ್ತು. ಶಂಕರಾಚಾರ್ಯರು, ಮತ್ತು ರಾಮಾನುಜಾಚಾರ್ಯರು ಎರಡೆರಡು ಸಲ ಅಲ್ಲಿ ಅಧ್ಯಯನದ ಸಲುವಾಗಿ ಯಾತ್ರೆ ಕೈಗೊಂಡಿದ್ದರು.
ಹಾಗೇ...ಇದೆಲ್ಲಾ ಪರಶುರಾಮ, ವರುಣದೇವನ ಕೃಪೆಯಿಂದ ಸಮುದ್ರವನ್ನು ಹಿಮ್ಮೆಟ್ಟಿಸಿ ಪಡೆದ ಭೂಮಿಯಿದು. ಕ್ಷತ್ರಿಯರ ಹತ್ಯೆಯ ಪಾಪದಿಂದ ಶಾಪಗ್ರಸ್ತನಾದ ಪರಶುರಾಮ, ಪಶ್ಚಿಮ ಮುಖನಾಗಿ ನಿಂತು ಸಮುದ್ರದ ದಿಕ್ಕಿನಲ್ಲಿ ತನ್ನ ಕೊಡಲಿಯಿಂದ ಏಳು ಮೂಲೆಗಳನ್ನು ಗುರುತು ಮಾಡಿ ಇಷ್ಟು ಭಾಗದ ಸಮುದ್ರವನ್ನು ಹಿಮ್ಮೆಟ್ಟಿ ನನಗೆ ಈ ಭೂಮಿಯನ್ನು ಬಿಟ್ಟುಕೊಡಿ ಎಂದು ವರುಣದೇವನನ್ನು ಕೋರುತ್ತಾನೆ.
ಈ ಸಪ್ತ-ಕೋಣ-ಕಣ..ಮುಂದೆ ಸಪ್ತಕೊಂಕಣವಾಗುತ್ತದೆ. ಗೋಮಾಂತದಿಂದ ಕೇರಳದೇಶದ ದಕ್ಷಿಣದ ತುದಿಯವರೆಗೂ ಹರಡಿದ ಈ ನಾಡಿಗೆ ಪರಶುರಾಮ ಕ್ಷೇತ್ರವೆಂಬ ಹೆಸರೇ ನಿಲ್ಲಬೇಕಿತ್ತು, ಕಶ್ಯಪರ ಕಾಶ್ಮೀರಕ್ಕೆ ಇದ್ದ ಹಾಗೆ. ಅಲ್ಲಿ ಕಶ್ಯಪರು ಸತೀಸರವೆಂಬ ಅಗಾಧವಾದ ಸರೋವರವನ್ನು ಬರಿದು ಮಾಡಿ ಕಾಶ್ಮೀರವನ್ನು ಕಟ್ಟಿದರೆ, ಇಲ್ಲಿ ಪರಶುರಾಮ ಸಮುದ್ರವನ್ನೇ ಹಿಂದಕ್ಕಟ್ಟಿ ಪರಶುರಾಮ ಕ್ಷೇತ್ರವನ್ನು ಸ್ಥಾಪಿಸಿದ. ಆದರೆ ಇಬ್ಬರೂ ಸೃಷ್ಟಿಸಿದ ಈ ಪುಣ್ಯಕ್ಷೇತ್ರಗಳು ವೇದಸಾರಗಳ ಭಂಡಾರವಾಗಿ, ಪಾಪನಾಶಿನಿಗಳಾಗಿ, ಜ್ಞಾನಿಗಳ ತವರಾಗಿ ಬೆಳೆಯಬೇಕೆಂಬುದೇ ಇಬ್ಬರ ಉದ್ದೇಶವಾಗಿತ್ತು.
ಮುಂದೆ ಪರಶುರಾಮ ಉತ್ತರದ ಸರಸ್ವತೀ ನದಿ ತೀರದಲ್ಲಿ ನೆಲಸಿದ್ದ ನೂರು ಬ್ರಾಹ್ಮಣ ಕುಟುಬಗಳನ್ನು ಕರೆತಂದು ಯಜ್ಞ ಹೋಮಾದಿಗಳನ್ನು ನಡೆಸಿ ಈ ಸ್ಥಳದ ಧರ್ಮ ಸ್ಥಾಪನೆ ನಡೆಸಿದರು.
ಇಲ್ಲಿಯ ಕೆಲವು ದೇವಾಲಯಗಳು ಭಕ್ತಿಕೇಂದ್ರವಾಗಿ ಬೆಳೆದರೆ ಮತ್ತೆ ಕೆಲವು ಮುಕ್ತಿಕೇಂದ್ರಗಳಾಗಿ ಸ್ಥಾಪಿತವಾದವು. ಈಗ ನಾವು ಗೋಕರ್ಣದಿಂದ ಪ್ರಾರಂಭಿಸಿ, ಕೊಲ್ಲೂರು, ಕೋಟೇಶ್ವರ, ಉಡುಪಿ, ಸುಬ್ರಹ್ಮಣ್ಯ, ಶಂಕರನಾರಾಯಣ ಮತ್ತು ಕುಂಬಾಶಿಗಳು ಕೆಲವು ಅಷ್ಟೆ…
ಮುಂದೇನಾಯಿತೆಂದರೆ... ದ್ವಾರಕೆಯಿಂದ ಜರಾಸಂಧನ ಕಾಟತಾಳಲಾರದೆ ಹಲವಾರು ಯಾದವರು ತಮ್ಮ ಗೋವುಗಳೊಂದಿಗೆ
ಈಗಿನ ಗೋವಾ ' ಗೋವಾಪುರಿ ' ನಗರಕ್ಕೆ ಬಂದು ನೆಲಸಿದರು. ಅಷ್ಟರಲ್ಲಾಗಲೇ ಪರಶುರಾಮ ಸರಸ್ವತೀ ನದಿ ತೀರದಿಂದ ಕರೆತಂದಿದ್ದ ಬ್ರಾಹ್ಮಣರು ಈ ಕ್ಷೇತ್ರದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರಾಗಿ, ಸಂತಾನ ವೃಧ್ಧಿಸಿ, ಕಾಶ್ಮೀರದಂತೆ ಈ ಕ್ಷೇತ್ರದಲ್ಲಿಯೂ ವೇದ ಉಪನಿಷತ್ತುಗಳ ರಚನೆ, ವ್ಯಾಸಂಗಗಳನ್ನು ನಿರಂತರವಾಗಿ ಮಾಡಲಾರಂಭಿಸಿದರು.....
ಸ್ವಲ್ಪ ಹೊತ್ತು ಹಾಗೇ ಕಣ್ಣುಮುಚ್ಚಿ ನಿಂತರು ವ್ಯಾಸತೀರ್ಥರು. ಇವರು ಪರಶುರಾಮನ ಕಾಲಕ್ಕೇ ಹೋದರೇನೋ ಎನಿಸಿತು.
ಮತ್ತೆ ಕಣ್ಣು ತೆರದು ಇಹಕ್ಕೆ ಮರಳಿದರು.
'ಹಾಂ..ನಿನಗೆ ಗೊತ್ತಿರಲಾರದು, ಕೃಷ್ಣದೇವರಾಯರು ಪಟ್ಟಾಭಿಷೇಕವಾದ ಕೆಲವೇ ದಿನಗಳಲ್ಲಿ ಈ ಸಪ್ತಮುಕ್ತಿ ಕೇಂದ್ರಗಳ ಯಾತ್ರೆ ಮಾಡಿದ್ದರು. ತುಲಾಭಾರದಲ್ಲಿ ತಮ್ಮ ತೂಕದ ಚಿನ್ನದ ವರಾಹಗಳನ್ನು ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಅಭಿವೃದ್ಧಿಗೋಸ್ಕರ ದೇಣಿಗೆ ಕೊಟ್ಟಿದ್ದರು. ಈಗ ಏನೇನಾಗಿದೆ ಎಂದು ನೋಡಲು ಬಲು ಉತ್ಸಕರಾಗಿದ್ದಾರೆ'.
ರಾಯರ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರು ಆಗುತ್ತಿದ್ದರಿಂದ ರಾಣಿಯವರು ಗೋಕರ್ಣದಲ್ಲಿ ಮಹಾಮೃತ್ಯುಂಜಯ ಹೋಮ ನೆರವೇರಿಸಿಕೊಡಿ ಎಂದು ವ್ಯಾಸತೀರ್ಥರನ್ನು ಕೋರಿದ್ದು ನೆನಪಾಯಿತು. ರಾಯರ ಆರೋಗ್ಯದ ಬಗ್ಗೆ ಎಲ್ಲರೂ ಚಿಂತಿತರಾಗಿದ್ದರು..ಈ ವಿಷಯವನ್ನು ಬಹಿರಂಗವಾಗಿ ಯಾರೂ ಮಾತಾಡುತ್ತಿರಲಿಲ್ಲ ಆದರೆ ವಿಷಯ ಪ್ರಸ್ತಾಪವಾದಾಗಲೆಲ್ಲಾ ಆತಂಕದ ಅಲೆಗಳ ಕಂಪನವನ್ನು ಅಲ್ಲಗಳೆಯುವಂತಿರಲಿಲ್ಲ..
ಗೋಕರ್ಣದ ಮಹಬಲೇಶ್ವರಾ..ನಮ್ಮ ರಾಯರಿಗೆ ನೂರಾರು ಕಾಲ ಆಯುರಾರೋಗ್ಯವನ್ನು ದಯಪಾಲಿಸು. ನಿನ್ನಲ್ಲಿರುವ ಎಲ್ಲಾ ಬಲವನ್ನು ಅವರಿಗೆ ಕರುಣಿಸಿ ಕಾಪಾಡಪ್ಪಾ..ಎಂದು ನಾನೂ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಪ್ರಾರ್ಥಿಸಿದೆ.
ಬಿದ್ದ ಎರಡು ಕಣ್ಣೀರಿನ ಹನಿಗಳು ನಿನಗೇ ಅರ್ಪಿತ...
ಸಪ್ತಮುಕ್ತಿ ಕೇಂದ್ರಗಳ ದೇವಸ್ಥಾನಗಳಿಗೆ ಕೊಡುವ ಅನುದಾನ, ಅರ್ಪಿಸುವ ಕಾಣಿಕೆಗಳಿರುವ ರಾಜ ಪಿಟಾರಿಯ ರಕ್ಷಣೆಗೆ ನನ್ನನ್ನು ನಿಯಮಿಸಿರುವುದರಿಂದ ನಾನು ಇಲ್ಲಿಂದ ಸದ್ಯಕ್ಕೆ ಕದಲುವ ಹಾಗಿಲ್ಲ. ವ್ಯಾಸತೀರ್ಥರು ಆಯ್ಕೆ ಮಾಡಿರುವ ಮೂವರು ಯುವಕ ಪುರೋಹಿತರ ತಂಡ ಈಗಾಗಲೇ ಗೋಕರ್ಣದ ಮಹಬಲೇಶ್ವರ ಮಂದಿರದಲ್ಲಿ ರಾಜಪರಿವಾರಕ್ಕಾಗಿ ಕಾಯುತ್ತಿರಬಹುದು. ಆಗಾಗ ಅವರನ್ನು ಭೇಟಿಯಾಗಿ ಕೇಳುತ್ತೇನೆ ಏನೆಲ್ಲಾ ನಡೆಯಿತು ಈ ಪುಣ್ಯಕ್ಷೇತ್ರಗಳಲ್ಲಿ ಎಂದು. ನಿನ್ನೆಯಿಂದ ವ್ಯಾಸತೀರ್ಥರ ಅಕ್ಕನವರೂ ಕೆಲವು ಯುವಕರೊಂದಿಗೆ ಮುಳುಬಾಗಿಲಿನ ಶ್ರೀಪಾದ ಮಠದಿಂದ ಬಂದಿದ್ದಾರಂತೆ. ಇನ್ನುಮುಂದಾಗುವ ಪೂಜಾ ವಿವರಗಳನ್ನು ಅವರೇ ಕೊಡುತ್ತಾರೆ..
![]() |
| Image Courtesy: Google Photos |
✍️…..ವಿಂಗ್ ಕಮಾಂಡರ್ ಸುದರ್ಶನ



Comments
Post a Comment