ಬಂಡೆಗಳ ಬಸಿರಿನಲ್ಲಿ ಹಸಿರು ಹಂಪೆ
ಬಂಡೆಗಳ ಬಸಿರಿನಲ್ಲಿ ಹಸಿರು ಹಂಪೆ
ಹಂಪೆ ಮತ್ತು ಕಮಲಾಪುರದ ನಡುವೆ ನಮ್ಮ ಹಳ್ಳಿ ಮಾದಲಾಪುರ."ಊಟದ ಕಾಲುವೆ " ನಮ್ಮ ಹಳ್ಳಿಯನ್ನು ಸುತ್ತಿಕೊಂಡು ಹೋಗುತ್ತದೆ. ಈ ಕಾಲುವೆಗೆ ಇಂತಹ ವಿಚಿತ್ರವಾದ ಹೆಸರು ಏಕೆ ಬಂತು ಎಂದು ತುಂಬಾ ಜನರು ಕೇಳುತ್ತಲೇ ಇರುತ್ತಾರೆ. ಮಹಾನವಮಿ ದಿಬ್ಬವನ್ನು ಕಟ್ಟುವಾಗ ಅದರಲ್ಲಿ ಬಳಸಲಾದ ಹಸಿರು ಬಣ್ಣದ ಬೆಣಚುಕಲ್ಲಿನ ಚಪ್ಪಡಿಗಳನ್ನು ಈ ಕಾಲುವೆಯ ಇಬ್ಬದಿಗಳಲ್ಲೂ ಹಾಸಲಾಗಿದೆ. ಈ ಕಲ್ಲು ಚಪ್ಪಡಿಗಳ ಮಧ್ಯ ಬಾಳೆಎಲೆಯ ಆಕಾರದಲ್ಲಿ ತಗ್ಗಾಗಿ ಕೆತ್ತನೆ ಮಾಡಿ, ಸುತ್ತಲೂ ಐದಾರು ಬಟ್ಟಲುಗಳ ಆಕಾರದ ಗುಂಡಿಗಳಿವೆ. ದಸರಾ ದಿಬ್ಬವನ್ನು ಕಟ್ಟುವ ನೂರಾರು ಕೆಲಸಗಾರರು ಮಧ್ಯಾಹ್ನದ ಊಟಕ್ಕೆಂದು ಮಾಡಿಕೊಂಡ ವ್ಯವಸ್ಥೆಯಂತೆ. ಇದರ ಪಕ್ಕದಲ್ಲಿ ನಮ್ಮ ಹೊಲವಿದ್ದುದರಿಂದ ಆಗಾಗ ನಾವೂ ಸಹ ಇದರ ಮೇಲೆ ಬಾಳೆಎಲೆ ಹಾಸಿಕೊಂಡು ವನಭೋಜನದ ಆನಂದವನ್ನು ಅನುಭವಿಸುತ್ತಿದ್ದೆವು.
ನಮ್ಮದು ಮೂವತ್ತಾರು ಜನಗಳಿರುವ ಅವಿಭಾಜ್ಯ ರೈತ ಕುಟುಂಬ. ನಮ್ಮ ಮುತ್ತಜ್ಜ ಲಕುಮಜ್ಜನಿಗೆ ಬುಕ್ಕಮ್ಮಾಜಿಯವರು ಇಪ್ಪತ್ತು ಎಕರೆ ಹೊಲವನ್ನು ಕಮಲಾಪುರದ ಕೆರೆಕಟ್ಟಲು ಧನಸಹಾಯ ಮಾಡಿದ್ದಕ್ಕೆ ಬಳುವಳಿಯಾಗಿ ಕೊಟ್ಟಿದ್ದರು. ಆ ಹೊಲ ಈ ಊಟದ ಕಾಲುವೆಯ ಪಕ್ಕದಲ್ಲೇ ಇತ್ತು. ಒಳ್ಳೆಯ ಫಲವತ್ತಾದ ನೀರಾವರಿ ಜಮೀನು. ಕಾಲುವೆಯ, ನದಿಯ ಅಥವಾ ಕೆರೆಗಳ ನೀರಿನ ಆಸರೆ ಇರುವ ಹೊಲಗಳನ್ನು ನಮ್ಮಕಡೆ "ನದಿ ಮಾತೃಕೆ" ಅಂತಾ ಕರೆಯುತ್ತಾರೆ. ಬರೀ ಮಳೆಯನ್ನೇ ನಂಬಿಕೊಂಡಿರುವ ಹೊಲಗಳನ್ನು "ದೇವ ಮಾತೃಕೆ " ಎನ್ನುತ್ತಾರೆ. ದೇವರು ಚೆನ್ನಾಗಿ ಮಳೆ ನಡೆಸಿಕೊಟ್ಟರೆ ಬೆಳೆ, ಇಲ್ಲಾಂದರೆ ದೇವರೇಗತಿ...ಅದಕ್ಕೇ ಹಾಗಂತಿದ್ದರೋ ಏನೋ !
ಈ ಬಂಡೆಗಾಡಿನ, ಬಿಸಿಲಿನ ನಾಡಿನ ನಡುವೆಯೂ ಫಲವತ್ತಾದ ವಿವಿಧ ರೀತಿಯ ಮಣ್ಣುಗಳಿರುವುದು ಈ ನಾಡಿನ ವೈಶಿಷ್ಟ್ಯ. ಕಪ್ಪುಬಣ್ಣದ ಫಲವತ್ತಾದ ಎರೆಮಣ್ಣಿನ ಹೊಲಗಳು ರಾಗಿ, ಜೋಳ ಬೆಳೆಯಲು ಯೋಗ್ಯವಾದ ಭೂಮಿಯಾದರೆ, ಜವುಗಿನ ಮಣ್ಣಿನಲ್ಲಿ ಭತ್ತ ಚೆನ್ನಾಗಿ ಬೆಳೆಯುತ್ತಿತ್ತು. ಇನ್ನು.. ಮೊಳೆ ಜೌಗಿನ ಗದ್ದೆ, ಬೀಜಾವರಿ ಗದ್ದೆ, ಮತ್ತು ಕುಳಗದ್ದೆ ಹೀಗೆ ಹಲವಾರು ತರಹದ ಮಣ್ಣಿನ ಗುಣಕ್ಕನುಸಾರವಾಗಿ ಹೆಸರುಗಳಿದ್ದವು. ಯಾವ ತರಹದ ಮಣ್ಣಿನಲ್ಲಿ ಯಾವ ಬೆಳೆ ಬೆಳಯಬಹುದೆನ್ನುವುದನ್ನು ನಮ್ಮ ಹಿರಿಯರ ಮಾತುಕತೆಗಳನ್ನು ಕೇಳಿಸಿಕೊಂಡ ಬೆಳೆದವರು ನಾವು. ಮಣ್ಣಿನ ವಾಸನೆಯಿಂದಲೇ ಅದರ ಫಲವತ್ತತೆಯ ಬಗ್ಗೆ ಹೇಳುತ್ತಿದ್ದರು ನಮ್ಮ ಹಿರಿಯರು. ಅಷ್ಟರ ಮಟ್ಟಿಗೆ ಇಲ್ಲಿಯ, ಈ ನಾಡಿನ ನೆಲ ಮತ್ತು ಜಲದೊಂದಿಗೆ ಬೆರೆತು ಹೋಗಿದ್ದ ರೈತರು ನಾವು.
ನೀರಿನ ಅನುಕೂಲ ಒಂದು ಮಾಡಿಕೊಟ್ಟರೆ ಚಿನ್ನವನ್ನೇ ನಮ್ಮ ರೈತರು ಬೆಳೆಯುತ್ತಾರೆ ಎನ್ನುವ ನಿಲುವು ವಿಜಯನಗರದ ಅರಸರದು. ಅದಕ್ಕೆಂದು ಅವರು ಯಥೇಚ್ಚವಾಗಿ ಹಣ ಖರ್ಚು ಮಾಡಿ ಅಣೆಕಟ್ಟುಗಳು, ಕಾಲುವೆಗಳು, ಕೆರೆಗಳು, ಕೊಳ ಬಾವಿಗಳು ಮತ್ತು ಕೊಂಡಗಳನ್ನು ಕಟ್ಟಿಸಿದ್ದಾರೆ. ಬುಕ್ಕರಾಯರ ಕಾಲದಲ್ಲೇ "ಹಿರಿಯ ಅಣೆಕಟ್ಟು" ಕಟ್ಟಿಸಿದ್ದರಂತೆ. ಎರಡು ಬೆಟ್ಟಗಳ ನಡುವೆ ಯತೇಚ್ಚವಾಗಿದ್ದ ದೊಡ್ಡ ಗಾತ್ರದ ಬಂಡೆಗಳು ಮತ್ತು ಕಬ್ಬಿಣದ ಗೂಟ ಮತ್ತು ತಂತಿಗಳಿಂದಲೇ ನಿರ್ಮಿಸಿದರು. ನದಿಪಾತ್ರವನ್ನು ಅಂಕುಡೊಂಕಾಗಿ ತಿರುಗಿಸಿ, ನೀರಿನ ಒತ್ತಡ ಅಣೆಕಟ್ಟಿನ ಮೇಲೆ ಬೀಳದಂತೆ ಎಚ್ಚರಿಕೆವಹಿಸಿ ಕಟ್ಟಿದ್ದಂತೆ. ಅಣೆಕಟ್ಟಿನಿಂದ ಹೊರಹರಿದ ನೀರು ಎರಡು ಗುಡ್ಡಗಳ ನಡುವಿನ ಕಣಿವೆಯಲ್ಲಿ ರಭಸವಾಗಿ, ಅವಸರವಾಗಿ ಹರಿಯುತ್ತಿದ್ದ ಹಿರಿಯಕಾಲುವೆಯನ್ನು 'ತುರ್ತು ಕಾಲುವೆ' ಎಂದು ಕರೆಯಲಾರಂಭಿಸಿದರಂತೆ. ಇದೊಂದೇ ಕಾಲುವೆಯೇ ಸಾವಿರಾರು ಜನ ರೈತರ ಜೀವನಾಧಾರವಾಗಿತ್ತು.
ಈ ಉದ್ದನೆಯ ಕಾಲುವೆಗೆ ಕಡ್ಡಿರಾಂಪುರದ ಬಳಿ ಇರುವ ದೊಡ್ಡದೊಂದು ಸೇತುವೆಯ ಪಕ್ಕದಲ್ಲೇ ನಮ್ಮದು ಇನ್ನೂ ಇಪ್ಪತ್ತು ಎಕರೆ ಭತ್ತದ ಕಟ್ಟೆ ಇದೆ. ಇದರಲ್ಲಿ ಯಥೇಚ್ಚವಾಗಿ ಭತ್ತ ಮತ್ತು ಕಬ್ಬು ಬೆಳೆಯುತ್ತೇವೆ. ವರ್ಷಕ್ಕಾಗುವಷ್ಟು ಅಕ್ಕಿ ಮತ್ತು ಬೆಲ್ಲ ಈ ಗದ್ದೆಯಿಂದಲೇ ಪೂರೈಕೆಯಾಗುತ್ತಿತ್ತು. ದೊಡ್ಡ ಸಂಸಾರ ನಮ್ಮದು. ಎಳ್ಳು, ನೆಲಗಡೆಯೂ ಯತೇಚ್ಚವಾಗಿ ಬೆಳೆಯುತ್ತಿದ್ದೆವು. ಕಟಾವು ಮುಗಿದು ಗಾಣಿಗರಿಗೆ ಕೊಟ್ಟರೆ ಸಾಕು ನಾಲ್ಕು ದೇವಸ್ಥಾನಗಳಿಗೆ ವರ್ಷಕ್ಕಾಗುವಷ್ಟು ಎಣ್ಣೆಯನ್ನು ಕೊಟ್ಟು ಮಿಕ್ಕಿದ್ದು ನಮ್ಮ ಮನೆಗೆ ಸಾಕಾಗುತ್ತಿತ್ತು.
ಸೇತುವೆಯ ಪಕ್ಕದಲ್ಲಿರುವ ರಘುನಾಥ ದೇವಸ್ಥಾನವನ್ನು ನಮ್ಮ ಅಜ್ಜ ಕಾಳಜ್ಜ ಕಟ್ಟಿಸಿದ್ದು. ಆ ದೇವಸ್ಥಾನ ಕಟ್ಟಿದ್ದರಿಂದ ನಮ್ಮ ಮನೆತನದಲ್ಲಿ ಸುಭಿಕ್ಷವಾದ ಕಾಲ ನಡೆಯುತ್ತಿದೆ ಎನ್ನುವ ನಂಬಿಕೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹೆಚ್ಚಾದಂತೆ ಕೃಷ್ಣದೇವರಾಯರ ಕೃಪೆಯಿಂದ ಸುತ್ತಲಿನ ನಲವತ್ತು ಎಕರೆ ಹೊಲವನ್ನು ದೇವಸ್ಥಾನಕ್ಕೆ ದಾನಮಾಡಿದರು. ಈ ಹೊಲದ ಉಸ್ತುವಾರಿಯನ್ನು ನೋಡಿಕೊಳ್ಳಲು ನಮ್ಮ ತಂದೆ ಒಬ್ಬ ಪಾರುಪತ್ಯೆದಾರರನ್ನು ನಿಯಮಿಸಿದರು. ಹೊಲದಿಂದ ಬಂದ ವರಮಾನವನ್ನು ನಮ್ಮ ಕುಟುಂಬದ ಖರ್ಚು ವೆಚ್ಚಕ್ಕೆ ಉಪಯೋಗಿಸುತ್ತಿರಲಿಲ್ಲ. ಅದೇನಿದ್ದರೂ ದೇವಸ್ಥಾನದ ಕಾರ್ಯಕ್ರಮಗಳಿಗೆ, ಅನ್ನದಾನಕ್ಕೆ ಮತ್ತು ಅರ್ಚಕರ ಸಂಭಾವನೆಗೆ ಮೀಸಲಾಗಿಡುತ್ತಿದ್ದರು. ಇದರ ಆದಾಯದಲ್ಲಿ ದೇವಸ್ಥಾನದಲ್ಲಿ ಒಂದು ಗುರುಕುಲವೂ ನಡೆಯುತ್ತಿತ್ತು.
ಸೋಮವಾರ ಬಂತೆಂದರೆ ನಮಗೆಲ್ಲಾ ಖುಷಿ. ಹಬ್ಬದ ವಾತಾವರಣ ಅವತ್ತು. ಕೆಯ್ಮೆಗೆ ಅವತ್ತು ರಜಾದಿನ. ಬೆಳಗ್ಗೇನೇ ಎಲ್ಲಾ ರಾಸುಗಳನ್ನು ಹಳ್ಳಕ್ಕೆ ಹೊಡೆದುಕೊಂಡು ಹೋಗಿ ಅವುಗಳಿಗೆ ಉಜ್ಜಿ ಉಜ್ಜಿ ಮೈ ತೊಳೆಯುತ್ತಿದ್ದೆವು. ಚಿಕ್ಕ ಮಕ್ಕಳು ಕರುಗಳಿಗೆ ಸ್ನಾನಮಾಡಿಸುತ್ತಾ, ನೀರಿನಲ್ಲಾಡುತ್ತಾ ಕೇಕೆ ಹಾಕುತ್ತಿದ್ದರೆ, ದೊಡ್ಡವರು ದೊಡ್ಡರಾಸುಗಳ ಉಸ್ತುವಾರಿ. ಮನೆಗೆ ಬಂದು ಎಲ್ಲಾ ರಾಸುಗಳಿಗೆ ಪೂಜೆಮಾಡಿ ಅವುಗಳಿಗೆ ಗೋಧಿ, ಅಕ್ಕಿಯ ಹುಗ್ಗಿ ತಿನ್ನುಸುತ್ತಿದ್ದೆವು. ಚಿಕ್ಕ ಚಿಕ್ಕ ಕರುಗಳಿಗೆ ಅದರ ತಾಯಿಯ ಹಾಲು, ಅವತ್ತು ಆ ಹಸುವಿನ ಹಾಲು ಕರೆಯುತ್ತಿರುತ್ತಿರಲಿಲ್ಲ.
ಮನೆಯ ಮುವತ್ತಾರು ಜನದ ಜೊತೆಗೇ ಇನ್ನು ಇಪ್ಪತ್ತು ಮಂದಿಗೆ ಅವತ್ತು ಹಬ್ಬದ ಊಟ. ಮಧ್ಯಾಹ್ನ ವಿರೂಪಾಕ್ಷ ದೇವಸ್ಥಾನಕ್ಕೆ ಕೆಲವು ಮೂಟೆ ದವಸ ಧಾನ್ಯಗಳನ್ನು ಕೊಟ್ಟು, ದೇವಸ್ಥಾನದ ಮುಂದಿನ ವಿರೂಪಾಕ್ಷ ಪೇಟೆಯಲ್ಲಿ ಮನೆಗೆ ಬೇಕಾದ ಪಧಾರ್ಥಗಳೆನ್ನು ಖರೀದಿಸಿದರೆ ಸೋಮವಾರದ ಸಂಭ್ರಮ ಮುಗಿದ ಹಾಗೇ..
ಕೃಷ್ಣದೇವರಾಯರ ಪಟ್ಟಾಭಿಷೇಕಕ್ಕೂ ಮೊದಲು ಸ್ವಲ್ಪ ಅತಂತ್ರ ಪರಿಸ್ಥಿತಿಯಲ್ಲಿತ್ತು ಹಂಪೆ. ಪ್ರಕೃತಿಯೂ ಮುನಿಸಿಕೊಂಡು ಬರಗಾಲ ಬಂದಿತ್ತು. ಕಳ್ಳಕಾಕರು ನಿರ್ಭಯವಾಗಿ ಓಡಾಡಿಕೊಂಡಿದ್ದರು. ಮಾಡಲು ಕೆಲಸವಿಲ್ಲದೆ ಜನ ಸೋಮಾರಿತನಕ್ಕೆ ಮಾರುಹೋಗಿದ್ದರು. ಭಯ ಭಕ್ತಿಗಳಿಲ್ಲದ ಆರಾಜಕ ಕಾಲವದು. ಆದರೆ ಅವರ ಪಟ್ಟಾಭಿಷೇಕ ಆದನಂತರ ಪರಿಸ್ಥಿತಿ ಸುಧಾರಿಸಿತು. ಬೀಳು ಬಿಟ್ಟ ಹೊಲಗಳನ್ನೆಲ್ಲಾ ರಾಜ್ಯದ ಅಧಿಕಾರಿಗಳು ವಶಪಡಿಸಿಕೊಂಡು ಶ್ರಮಜೀವಿಗಳಿಗೆ ಕೊಡಲಾಯಿತು. ವಾರಸುದಾರರಿಲ್ಲದ ಜಮೀನುಗಳನ್ನು ಮಾರಿ ಕೆರೆ , ಬಾವಿಗಳನ್ನು ತೋಡಲಾಯಿತು, ಕಾಲುವೆಗಳನ್ನು ಕಟ್ಟಲಾಯಿತು. ಪ್ರಕೃತಿಯೂ ಕೋಪ ಬಿಟ್ಟು ನಸುನಗಲಾರಂಭಿಸಿತು.
ಸುಭೀಕ್ಷಕಾಲ ಮತ್ತೊಮ್ಮೆ ಮರಳಿ ಬಂತು....
ಕೃಷ್ಣದೇವರಾಯರ ಕಾಲದಲ್ಲಿ ಕರ ತೆರಿಗೆಗಳು ಹೆಚ್ಚಾಗಿವೆ ಎನ್ನುವ ಅಸಮಧಾನದ ಧ್ವನಿಗಳು ಅಲ್ಲಲ್ಲಿ, ಆಗಾಗ ಕೇಳಬರುತ್ತಿದ್ದವು. ಸಾಮ್ರಾಜ್ಯದ ಪುಕ್ಕಟ್ಟೆ ಅನ್ನ ತಿನ್ನುತ್ತಿದ್ದ ಭಟ್ಟಂಗಿಗಳು ಹೀಗೆ ಮಾತನಾಡುತ್ತಿದ್ದರೇ ಹೊರತು ನಮ್ಮಂತಹ ದುಡಿದು ಉಣ್ಣುವ ಮಣ್ಣಿನ ಮಕ್ಕಳು ಹೀಗೆ ಮಾತನಾಡುತ್ತಿರಲಿಲ್ಲ.
ಒಂದು ಸಾಮ್ರಾಜ್ಯದ ಸುರಕ್ಷತೆಯನ್ನುವಹಿಸಿಕೊಂಡ ರಾಜನಿಗೆ ಗೊತ್ತು ಒಂದು ಬಲವಾದ ಸೈನ್ಯದ ಅವಶ್ಯಕತೆ. ಅರಬ್ಬೀ ಕುದುರೆಗಳು, ಬರ್ಮಾದ, ಸಿಲೋನಿನ ಆನೆಗಳು, ಸೈನಿಕರ ಖರ್ಚು ವೆಚ್ಚ. ಸಾಮ್ರಾಜ್ಯದ ವಿಸ್ತರಣೆ ಮಾಡಬೇಕೆಂದರೆ ಇನ್ನೂ ಅಗಾಧವಾದ ಸೈನ್ಯ ಕಟ್ಟಬೇಕು. ಸೈನ್ಯ ದೊಡ್ಡದಿದ್ದಷ್ಟೂ ಯುಧ್ಧದಲ್ಲಿ ಸಾವು ನೋವುಗಳು ಕಡಿಮೆ. ಕೆಲವೊಮ್ಮೆ ಯಾವ ರಕ್ತಪಾತವಿಲ್ಲದೆ ಸಾಮ್ರಾಜ್ಯದ ವಿಸ್ತರಣೆ ನಡೆಯುತ್ತಿತ್ತು.
ಇದಕ್ಕೆಲ್ಲಾ ಆದಾಯದ ಮೂಲ ಶ್ರೀಮಂತ ರೈತರು ಮತ್ತು ಶ್ರೀಮಂತ ವರ್ತಕರು....ಒಟ್ಟಾರೆ ಶ್ರೀಮಂತ ಪ್ರಜೆಗಳಿದ್ದಲ್ಲಿ ನಾಡೂ ಶ್ರೀಮಂತ.
ಮತಾಂಧರು, ಅಧರ್ಮೀಯರಿಂದ ರಕ್ಷಣೆ ಬೇಕು, ಶಾಂತಿ ಮತ್ತು ಸಮೃದ್ಧ ವಾತಾವರಣವೂ ಬೇಕು ಇದೆಲ್ಲದಕ್ಕೂ ಒಂದು ನಿಗದಿತ ಮೌಲ್ಯವಿರುತ್ತದೆ. ಕೆಲವರು ಇದನ್ನು ಕರ ತೆರಿಗೆಗಳ ಮುಖಾಂತರ ಕಟ್ಟಿದರೆ, ಇನ್ನು ಕೆಲವರಿಗೆ ಪ್ರಾಣತ್ಯಾಗದ ಅನಿವಾರ್ಯತೆ...
✍...ವಿಂಗ್ ಕಮಾಂಡರ್ ಸುದರ್ಶನ
sudarshanbadangod@gmail.com

Comments
Post a Comment