ಚಿಕ್ಕರಾಯರಿಗಾಗಿ ಚಂಡಿಕಾ ಹೋಮ


               ರಾಜಪರಿವಾರ ಕೊಲ್ಲೂರಿಗೆ ತಲುಪಿ ವಿಶ್ರಾಂತಿ ಪಡೆಯುತ್ತಿದ್ದಾರೆ, ವ್ಯಾಸತೀರ್ಥರು ಮರುದಿನ ನಡೆಯಲಿರುವ ಚಂಡಿಕಾ ಹೋಮದ ಸಿಧ್ಧತೆಗಳನ್ನು ಪರಿಶೀಲಿಸಲು ಮುಖ್ಯ ಪುರೋಹಿತರ ಜೊತೆ ಮೂಕಾಂಬಿಕ ದೇವಸ್ಥಾನದ ಆವರಣದಲ್ಲಿದ್ದಾರೆ ಎಂದು ತಿಳಿದಕೂಡಲೇ ನಾನು ಮುಳುಬಾಗಿಲಿನ ಶ್ರೀಮಠದ ಶಿಷ್ಯರೊಂದಿಗೆ ನನ್ನ ತಮ್ಮ ವ್ಯಾಸರಾಜರನ್ನು ಕಾಣಲು ಹೊರಟೆ.  ಮಠದ ಶಿಷ್ಯರಿಗೆ ಅವರು ಸರಳೀಕರಿಸಿದ ವ್ಯಾಸರಾಜರ 'ನ್ಯಾಯಾಮೃತ' ಮತ್ತಿತರ ಗ್ರಂಥಗಳ ಬಗ್ಗೆ ಚರ್ಚಿಸಲು ಇದೇ ಸೂಕ್ತ ಸಮಯ.  ಅವರಿನ್ನೂ ಪುರೋಹಿತರ ಜೊತೆ ಮಾತನಾಡುತ್ತಿದ್ದದರಿಂದ ನಾವು ಸ್ವಲ್ಪ ದೂರದಲ್ಲಿ ಕುಳಿತುಕೊಂಡೆವು.  
ವಿಷಯ, ಲಘು ಚಂಡಿಕಾ ಹೋಮ ಮಾಡುವುದೋ ಅಥವಾ ಪೂರ್ಣ ಚಂಡಿಕಾ ಹೋಮ ಮಾಡುವುದೋ ಎಂಬುದರ ಬಗ್ಗೆ ನಡೆಯುತ್ತಿತ್ತು.   ಲಘು ಚಂಡಿಕಾ ಎಂದರೆ ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿಯರ ಆವಾಹನೆ. ಪೂರ್ಣ ಚಂಡಿಕಾ ಎಂದರೆ ಪೂರ್ಣರೂಪ, ಹದಿನಾರು ಕೈಗಳ ಶಕ್ತಿ ಸ್ವರೂಪಿಣಿಯ ಆವಾಹನೆ. ಬಹು ಸುಧೀರ್ಘವಾದ ಪ್ರಕ್ರಿಯೆ, ಒಮ್ಮೆ ಶುರು ಮಾಡಿದರೆ ಮಧ್ಯ ನಿಲ್ಲಿಸುವ ಹಾಗಿಲ್ಲ. ವ್ಯಾಸರಾಜರು ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗಿದರು. ಯಾವುದೋ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಂತೆ ಕಾಣಿಸಿದರು.  ಅವರ ಆಲೋಚನೆಗಳಿಗೆ ಭಂಗ ಬರದಂತೆ ಇತರರೂ ಮೌನವಹಿಸಿದರು. ಕೊನೆಗೆ ವ್ಯಾಸರಾಜರು ಮೌನವನ್ನು ಮುರಿದು ಮಾತನಾಡಿದರು,  ' ಚಿಕ್ಕರಾಯ ತಿರುಮಲರಾಯರಿಂದ ಈ ಹೋಮ ಮಾಡಿಸಬೇಕೆಂದಿದ್ದೆ, ಆದರೆ ಈಗಾಗಲೇ ಅವರು ಸಾಕಷ್ಟು ದಣಿದಿರುವುದಂತೆ ಕಾಣುತ್ತಿದ್ದಾರೆ, ಹಾಗಾಗಿ ಲಘು ಚಂಡಿಹೋಮವನ್ನೇ ನೆರವೇರಿಸಿಕೊಡಿ ' ‎ಎಂದರು. ಸಮೀಪದಲ್ಲೇ ನಾವು ಕುಳಿತದ್ದನ್ನು ಗಮನಿಸಿ‎'  ಬನ್ನಿ ಬನ್ನಿ ಇಲ್ಲೇ ಕುಳಿತುಕೊಳ್ಳಿ' ಎಂದು ಆಹ್ವಾನಿಸಿದರು.   ‎ನಾವೂ ಪುರೋಹಿತರಿಗೆ ವಂದಿಸಿ ಅಲ್ಲೇ ಕುಳಿತುಕೊಂಡೆವು. ನಮ್ಮ ಆಗಮನದಿಂದ ವ್ಯಾಸರಾಜರ ಮಖದಲ್ಲಿದ್ದ ಖಿನ್ನತೆ ಸ್ವಲ್ಪ ದೂರವಾದಂತೆ ಕಂಡಿತು. ರಾಜಪರಿವಾರದ ಬಗ್ಗೆಯೋ ಅಥವಾ ಸಾಮ್ರಾಜ್ಯದ ಬಗ್ಗೆಯೋ ಚಿಂತಿತರಾಗಿದ್ದರು ಎನ್ನುವುದು ನನಗಂತೂ ಸ್ಪಷ್ಟವಾಗಿತ್ತು, ಎಷ್ಟೇ ಆಗಲಿ ನನ್ನ ತಮ್ಮನಲ್ಲವೇ...  ‎ಅಷ್ಟರಲ್ಲಿ ಮುಖ್ಯ ಪುರೋಹಿತರು ಶ್ರೀಮಠದ ಶಿಷ್ಯರಿಗೆ ಚಂಡಿ ಹೋಮದ ಹಿನ್ನಲೆಯನ್ನು ವಿವರಿಸಲಾರಂಭಿಸಿದರು.
‎‎           ಮಾರ್ಕಾಂಡೇಯ ವಿರಚಿತ "ದೇವಿ ಮಹಾತ್ಮ್ಯ" ಗ್ರಂಥದ ಪಠನವೇ ಚಂಡಿಹೋಮದ ಮುಖ್ಯಭಾಗ.
‎‌ಹದಿಮೂರು ಅಧ್ಯಾಯಗಳಿರುವ ಇದರಲ್ಲಿ 700 ಶ್ಲೋಕಗಳಿವೆ, ಅದಕ್ಕೇ ಇದನ್ನು ' ದುರ್ಗಾ ಸಪ್ತಶತಿ' ಎಂದೂ ಕರೆಯುತ್ತಾರೆ. ಮೊದಲನೆ ಅಧ್ಯಾಯದಲ್ಲಿ ಮಧು ಕೈಟಭರ ಸಂಹಾರದಿಂದ ತ್ರಿಗುಣಿ ದೇವಿಯ ಪ್ರವೇಶ, ಪರಿಚಯದಿಂದ ಪ್ರಾರಂಭವಾಗುತ್ತದೆ. ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ಸಮ್ಮಿಲನವೇ ಚಂಡಿಕಾದೇವಿ. ಪ್ರಾರಂಭ ಅಧ್ಯಾಯದಲ್ಲಿ ಮಹಾಕಾಳಿಯ ಸ್ತುತಿ, ಮಧ್ಯಮ ಅಧ್ಯಾಯಗಳಲ್ಲಿ ಮಹಾಲಕ್ಷ್ಮೀ ಸ್ತುತಿ ಮತ್ತು ಉತ್ತರ ಅಧ್ಯಾಯಗಳಲ್ಲಿ ಮಹಾಸರಸ್ವತಿಯ ಸ್ತುತಿಗಳಿರುತ್ತವೆ. ಭೀಕರ ಸ್ವರೂಪಿಣಿ ಚಂಡಿಕಾ ಅವಾಹನೆ ತುಂಬಾ ಭಕ್ತಿಯಿಂದ, ತುಂಬಾ ಜಾಗ್ರತೆಯಿಂದ ಮಾಡಬೇಕು, ಹಾಗಾಗಿ ಮೊಟ್ಟಮೊದಲ ಹಂತ 'ದೇವಿ ಸೂಕ್ತ'
‎
‎          ಋಗ್ವೇದದ ಈ ಎಂಟು ಶ್ಲೋಕಗಳಲ್ಲಿ  ದೇವಿಯ ಬ್ರಹ್ಮ ಶಕ್ತಿ ಸ್ವರೂಪಿಣಿಯಾಗಿ ವರ್ಣಿಸಲಾಗಿದೆ. 'ಹನ್ನೊಂದು ರುದ್ರರಿಗೆ, ಎಂಟು ವಸುಗಳಿಗೆ, ಹನ್ನೆರಡು ಆದಿತ್ಯರಿಗೆ ಮತ್ತು ಎಲ್ಲಾ ದೇವತೆಗಳಿಗೆ ನಾನೇ ಆಧಾರ ಎನ್ನುವ ಅಗಾಧತೆಯನ್ನು ತೋರಿಸುತ್ತಾಳೆ.   ಮುಂದಿನ ಹಂತ 'ದುರ್ಗಾ ಕವಚ'....


"ಶೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವ ಸಿದ್ಧಿದಂ
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯತೇ ಸ೦ಕಟಾತ್.."
ಓ ದೇವಿ ನಾನು ನಿನಗೆ ಎಲ್ಲವನ್ನೂ ಕೊಡುವ ಸಿದ್ಧಿ ಕವಚವನ್ನು ಪಠಿಸುತ್ತೇನೆ.
ಉಮಾದೇವಿಯು ನನ್ನ ತಲೆಯನ್ನು ರಕ್ಷಿಸಲಿ,ಶೂಲಧಾರಿಣಿಯು ನನ್ನ ಹಣೆಯನ್ನು ರಕ್ಷಿಸಲಿ ,ಸಿಂಹವು ನನ್ನಕಣ್ಣುಗಳನ್ನು ರಕ್ಷಿಸಲಿ,ದ್ವಾರ ವಾಸಿನಿಯು ನನ್ನ ಕಿವಿಗಳನ್ನು ರಕ್ಷಿಸಲಿ. ಸುಗಂಧದಂತಿರುವ ದೇವಿಯು ನನ್ನ ನಾಸಿಕವನ್ನು ರಕ್ಷಿಸಲಿ,ಸರ್ವಾಧಾರಿಣಿಯಾದ ದೇವಿಯು ನನ್ನ ವದನವನ್ನು ರಕ್ಷಿಸಲಿ,ಚಂಡಿಕಾ ದೇವಿಯು ನನ್ನ ನಾಲಿಗೆಯನ್ನು ರಕ್ಷಿಸಲಿ,ಸೌಪತ್ರಿಕಾ ದೇವಿಯು ಕುತ್ತಿಗೆಯನ್ನು ರಕ್ಷಿಸಲಿ ಅಶೋಕ ವಾಸಿನಿಯು ನನ್ನ ಚೇತನವನ್ನು ರಕ್ಷಿಸಲಿ,ವಜ್ರ ಧಾರಿಣಿಯು ನನ್ನ ಎರಡು ಕೈಗಳನ್ನು ರಕ್ಷಿಸಲಿ,ಲಲಿತಾದೇವಿಯು ನನ್ನ ಹೃದಯವನ್ನು ರಕ್ಷಿಸಲಿ,ಸಿ೦ಹ ವಾಹಿನಿಯು ನನ್ನ ಉದರವನ್ನು ರಕ್ಷಿಸಲಿ, ಭಗವತಿ ದೇವಿಯು ನನ್ನ ಸೊ೦ಟವನ್ನು ರಕ್ಷಿಸಲಿ,ವಿಂಧ್ಯವಾಸಿನಿಯು ತೊಡೆಗಳನ್ನು ರಕ್ಷಿಸಲಿ,ಮಹಾಶಕ್ತಿಯುತಳು ನನ್ನ ಮೊಣಕಾಲನ್ನು ರಕ್ಶಿಸಲಿ,ಭೂತಲವಾಸಿನಿಯು ನನ್ನ ಪಾದಗಳನ್ನು ರಕ್ಷಿಸಲಿ. ಮೂರು ಲೋಕಗಳನ್ನು ರಕ್ಷಿಸುವ ದೇವಿಯು ನನ್ನ ಶರೀರದ ಎಲ್ಲಾ ಅಂಗಾಗಳನ್ನು ರಕ್ಷಿಸಲಿ.  ದುರ್ಗಾ ದೇವಿಗೆ ನನ್ನ ವ೦ದನೆಗಳು...' ಹೀಗೆ ಸರ್ವಾಂಗ ರಕ್ಷಣೆಗೆ ದುರ್ಗಾ ಕವಚವನ್ನು ಪಠಿಸಲಾಗುತ್ತದೆ.

       ಮುಂದಿನದು 'ಅರ್ಗಳ ಸ್ತೋತ್ರ'
ಇಪ್ಪತ್ತೇಳು ಪಂದ್ಯಗಳಲ್ಲಿ ದೇವಿಯ ಅಗಾಧತೆಯನ್ನು ಸ್ತುತಿಸಿ, ದೇವಿಯಲ್ಲಿ ವಿಜಯಪ್ರಾಪ್ತಿಗಾಗಿ ಪ್ರಾರ್ಥಿಸಲಾಗುತ್ತದೆ.  ಮುಂದೆ ಬರುವ 'ಕೀಳಕಂ' ಹದಿನಾರು ಶ್ಲೋಕದಲ್ಲಿ , ಸಂಕಷ್ಟ ಹರಣ, ಮನಃಶಾಂತಿ, ಆಧ್ಯಾತ್ಮಿಕ ಜ್ಞಾನ ದಯಪಾಲಿಸು ದೇವಿಯಲ್ಲಿ ಕೋರಲಾಗುತ್ತದೆ.
'ರಾತ್ರಿ ಸೂಕ್ತ'ದಲ್ಲಿ ಋಗ್ವೇದದ ಎಂಟು ಶ್ಲೋಕಗಳಲ್ಲಿ ದೇವಿಯನ್ನು ವಿಶ್ವೇಶ್ವರಿ, ಜಗಧ್ಧಾತ್ರಿಣಿ ಎಂದು ವರ್ಣಿಸಲಾಗಿದೆ.  ಮುಂಬರುವುದೇ "ದೇವಿ ಮಹತ್ಮ್ಯ" ಪಠನ..   ಅದನ್ನು ನಾಳೆ ಕೇಳುವಿರಂತೆ ಎಂದು ಪುರೋಹಿತರ ಸುಧೀರ್ಘ ವಿವರಣೆಯಿಂದ ಮುಂದೆ ನಡೆಯಲಿರುವ ಚಂಡೀಹೋಮದ ಮಹತ್ವ ಅರ್ಥವಾಯಿತು. ಅವರಿಗೆ ತುಂಬು ಹೃದಯದಿಂದ ವಂದಿಸಿದೆವು.
           
ವಿಜಯ ನಗರ ಸಾಮ್ರಾಜ್ಯ, ಹೊರಗಿನ ಮತ್ತು ಒಳಗಿನ ಶತ್ರುಗಳಿಂದ ಪಾರಾಗಲೀ..ಚಿಕ್ಕರಾಯರಿಗೆ ಆಯುರಾರೋಗ್ಯವನ್ನು ದಯಪಾಲಿಸು ದೇವೀ...ಎನ್ನುತ್ತಾ ಎದ್ದು ನಿಂತ ವ್ಯಾಸರಾಜರೊಂದಿಗೆ ನಾವೂ ಹೊರಡಲನುವಾದೆವು.

Comments

Popular posts from this blog

ದೂರದಿಂದ ಬಂದವರು

ಗೂಢಾಚಾರಿಕೆಯಿಂದ ಮುಕ್ತಿ ಯಾತ್ರೆಗೆ

ನಾಟ್ಯರಾಣಿ ಚಿನ್ನಮ್ಮದೇವಿ