ಯೋಧನ ಯಶೋಗಾಥೆ


 ಅವತ್ತು ಕೃಷ್ಣಜನ್ಮಾಷ್ಟಮಿ. ಆ ದಿನ ಇನ್ನೊಬ್ಬ ಕೃಷ್ಣರಿಗೂ,  ವಿಜಯನಗರ ಸಾಮ್ರಾಜ್ಯಕ್ಕೂ ವಿಶೇಷ ದಿನ. ಅಂದು
 ಶ್ರೀ ಕೃಷ್ಣದೇವರಾಯರ ಪಟ್ಟಾಭಿಷೇಕ.!

ಆಗ ನನಗಿನ್ನೂ ಇಪ್ಪತ್ತೊಂದು ವರ್ಷ. ಸೈನ್ಯಕ್ಕೆ ಸೇರಿ ಒಂದೂವರೆ ವರ್ಷವಷ್ಟೇ ಆಗಿತ್ತು.  ಕೃಷ್ಣದೇವರಾಯರಂತೆ ನಾವೂ ಸಹಾ ತುಳುವ ವಂಶಸ್ಥರು, ಇವರ ತಂದೆ ತುಳುವ ನರಸನಾಯಕರ ಸೈನ್ಯದಲ್ಲಿ ನನ್ನ ತಂದೆಯವರು ಸೈನಿಕರಾಗಿದ್ದರು. ಯುವರಾಜರ ಜೊತೆಗೆ ಯುಧ್ಧಮಾಡುತ್ತಿದ್ದಾಗ ಗಾಯಗೊಂಡರು, ಒಂದು ಕಾಲು ಕಳೆದುಕೊಂಡುಬಿಟ್ಟರು. ಯುಧ್ಧಭೂಮಿಯಿಂದ ಕೃಷ್ಣದೇವರಾಯರೇ ಅವರನ್ನು ರಕ್ಷಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದರಂತೆ. ಅವರ ಆರೋಗ್ಯ ಚೇತರಿಸಿಕೊಂಡ ನಂತರ ಅವರನ್ನು ಸೈನ್ಯದಲ್ಲಿ ಲೆಕ್ಕಿಗನಾಗಿ ಉಳಿಸಿಕೊಂಡರು. ಒಂದು ದಿನ ನಮ್ಮ ತಂದೆಯವರು ನನ್ನನ್ನು ಕರೆದು
‘ವಿರುಪಾಕ್ಷಾ..ಕೃಷ್ಣದೇವರಾಯರ ಋಣ ತೀರಿಸಲಿಕ್ಕಿದೆ..ನೀನೂ  ಸೈನ್ಯಕ್ಕೆ ಸೇರಿಕೊಂಡು ಈ ಸಾಮ್ರಾಜ್ಯದ ಸೇವೆ ಮಾಡು’ ಎಂದರು. ಕೆಲವೇ ದಿನಗಳಲ್ಲಿ ನಮ್ಮ ತಂದೆಯ ಆದೇಶದಂತೆ ನಾನೂ ಸೈನ್ಯಕ್ಕೆ ಸೇರಿಕೊಂಡೆ.

   ಸೈನ್ಯದಲ್ಲಿ ತರಬೇತಿಯ ಕ್ರಮವನ್ನು ಕೃಷ್ಣದೇವರೆ ಖುದ್ದಾಗಿ ನಿರ್ಮಿಸಿದ್ದಂತೆ. ಅವರು ಪಾಲಿಸುತ್ತಿದ್ದ ದಿನಚರಿಯನ್ನೇ ಸೈನ್ಯದ ನಾವೆಲ್ಲಾ ಅನುಸರಿಸುತ್ತಿದ್ದೆವು. 
ಸೂರ್ಯೋದಯಕ್ಕೆ ಮುಂಚೆ ನಾವೆಲ್ಲರೂ ಮೈದಾನದಲ್ಲಿ ಸೇರುತ್ತಿದ್ದೆವು. ಮೂರು ಮೈಲಿಗಳ ಓಟದ ನಂತರ, ಕವಾಯಿತು, ಕತ್ತಿವರಸೆ, ಕುದುರೆ ಸವಾರಿಯ ಅಭ್ಯಾಸ. ಉಪಹಾರದನಂತರ ಕುದುರೆ, ಆನೆಗಳ ಆರೈಕೆ. ಸುಮಾರು ಎರಡು ಸಾವಿರ ಕುದುರೆ ಸೈನಿಕರಲ್ಲಿ ನಾನೂ ಒಬ್ಬನು. ಒಂದೊಂದು ಕುದುರೆಯನ್ನು ಒಬ್ಬೊಬ್ಬ ಯೋಧನಿಗೆ ವಹಿಸಿದ್ದರು. ನಮ್ಮನ್ನು ನೋಡುತ್ತಿದ್ದಂತೆ ಆ ಕುದುರೆಗಳು ಸಂತೋಷದಿಂದ ಕೆನೆಯುತ್ತಿದ್ದವು. ನಾವೂ ಅಷ್ಟೇ ಆಸ್ಥೆಯಿಂದ ಅವುಗಳಿಗೆ ಹುರುಳಿ ತಿನ್ನಿಸಿ, ಮಾಲಿಷ್ ಮಾಡಿ ಆರೈಕೆ ಮಾಡುತ್ತಿದ್ದವು.

   ಪಟ್ಟಾಭಿಷೇಕವೇನೋ ಚೆನ್ನಾಗೆ ನಡೆಯಿತು. ಆದರೆ ರಾಜ್ಯದ ಸ್ಥಿತಿ ಸ್ವಲ್ಪ ಅತಂತ್ರದಲ್ಲಿದೆ, ಕೆಲವೇ ದಿನಗಳಲ್ಲಿ ಯುಧ್ಧದ ಸಂಭವವಿದೆಯೆಂದು ನನ್ನ ತಂದೆಯವರು ಹೇಳುತ್ತಿದ್ದರು. ಮೂರು ತಿಂಗಳಿಗೊಮ್ಮೆ , ಆರು ತಿಂಗಳಿಗೊಮ್ಮೆ ದಾಳಿ ಮಾಡಿ ಲೂಟಿಮಾಡಲು ಬರುತ್ತಿದ್ದ ಈ ಬಹಮನಿ ತುರುಕರನ್ನು ಹಿಮ್ಮೆಟ್ಟಿಸಲೇ ಬೇಕಾದ ಅನಿವಾರ್ಯತೆ ಇತ್ತು.
   ಹಾಗೆಯೇ ಆಯಿತು. ಪಟ್ಟಾಭಿಷೇಕವಾದ ಆರು ತಿಂಗಳಲ್ಲಿಯೇ ಕೃಷ್ಣದೇವರಾಯರ ಮುಂದಾಳುತ್ವದಲ್ಲಿ ಬಹಮನಿ ಸುಲ್ತಾನರ ಮೇಲೆ ಯುಧ್ಧದ ಘೋಷಣೆಯಾಗೇ ಬಿಟ್ಟಿತು. ವಿಜಯನಗರದ ಸೈನ್ಯ ರಾಯಚೂರಿನ ಕಡೆಗೆ ದೌಡಾಯಿಸಿತು. 
   ಪ್ರಧಾನ ಸೇನಾಪತಿಯಾಗಿ ತಿಮ್ಮರಸರ ಮುಂದಾಳತ್ವದಲ್ಲಿ ಮೊದಲ ವರ್ತುಲದಲ್ಲಿ ಮೂರುಸಾವಿರ ಕಾಲಾಳುಗಳು, ಮುನ್ನೂರು ಕುದುರೆ ಸೈನಿಕರು ಮತ್ತು ಮೂವತ್ತು ಆನೆಗಳು. ಅದೇ ಸಂಖ್ಯೆಯಲ್ಲಿ ಎರಡನೇ ವರ್ತುಲ ಇದರ ಮುಂದಾಳುತ್ವ ಕೃಷ್ಣದೇವರಾಯರದ್ದು. ಈ ವರ್ತುಲದಲ್ಲಿ ನಾನು ರಾಯರ ಜೊತೆ, 
ಇದೇ ನನ್ನ ಮೊದಲ ಯುಧ್ಧ... ಒಬ್ಬ ಸೈನಿಕನ ಜೀವನದಲ್ಲಿ ಮರೆಯಲಾರದ ಕ್ಷಣಗಳವು..ಮೊದಲ ಯುಧ್ಧ...ಉತ್ಸಾಹ, ಹುರುಪು, ಸಣ್ಣ ಅಳುಕು..ಅಂತಹ ಆತಂಕದ ಕ್ಷಣಗಳಲ್ಲೂ ಕೃಷ್ಣದೇವರಾಯರ ಜೊತೆ ಯುಧ್ಧಮಾಡುವ ಅವಕಾಶ ದೊರೆತು, ಧೈರ್ಯ ಬಂದಿತ್ತು.

  ಯುಧ್ಧದ ಮೊದಲನೇ ದಿನವೇ ಗುಂಡಿಗೆಯನ್ನೇ ನಡುಗಿಸುವ ಶಬ್ದ ಬಹಮನಿಯವರ ಕಡೆಯಿಂದ ಬರತೊಡಗಿದವು. ಆಗ ಮೊದಲನೆ ವರ್ತುಲದಲ್ಲಿ ಆಹಾಕಾರ ಶುರುವಾಯಿತು. ಬಹಮನಿ ತುರುಕರು ಅದೆಲ್ಲಿಂದ ತಂದಿದ್ದರೋ ಏನೋ...ಫಿರಂಗಿಯಿಂದ ದಾಳಿ ಶುರು ಮಾಡಿಬಿಟ್ಟರು. ಹಿಂದೆಂದೂ ಕೇಳರಿಯದ ಈ ಶಬ್ದ ಸೈನಿಕರ ಎದೆ ನಡುಗಿಸಿ ಬಿಟ್ಟಿತ್ತು, ಕುದುರೆಗಳು ಹೆದರಿಕೊಂಡವು, ಆನೆಗಳು ಘೀಳಿಡಲು ಶುರುಮಾಡಿದವು. 

ತಿಮ್ಮರಸರ ಆದೇಶಗಳು ಕೇಳಸುತ್ತಿರಲಿಲ್ಲ, ಗೊಂದಲ ಶುರುವಾಗಿ ಬಿಟ್ಟಿತು. ಕೂಡಲೇ ಕೃಷ್ಣದೇವರಾಯರು ನಮ್ಮ ವರ್ತುಲವನ್ನು ಶಬ್ದ ಬರುತ್ತಿದ್ದ ದಿಕ್ಕಿನಿಂದ ದೂರಕ್ಕೆ ಕರೆದುಕೊಂಡು ಬಂದು ಬಲಗಡೆಯಿಂದ ದಾಳಿ ಮಾಡಲು ಆದೇಶಿಸಿದರು. ಇದನ್ನು ನಿರೀಕ್ಷಿರಲಿಲ್ಲ ತುರುಕರು, ಒಂದೇ ಸಲ  ಕಕ್ಕಾಬಿಕ್ಕಿಯಾದರು. ಕೃಷ್ಣದೇವರಾಯರು ಕುದುರೆಯನ್ನು ಫಿರಂಗಿಗಳ ದಿಕ್ಕಿನಲ್ಲಿ ದೌಡಾಯಿಸಿದರು, ಅವರ ದಾಳಿ ನೇರವಾಗಿ ಫಿರಂಗಿಗಳನ್ನು ಸ್ಪೋಟಿಸುತ್ತಿದ್ದ ಸೈನಿಕರ ಮೇಲೆ. ಕ್ಷಣಾರ್ಧದಲ್ಲೇ ರಾಯರು ಅವರನ್ನೆಲ್ಲಾ ತುಂಡರಿಸತೊಡಗಿದರು. ಆ ಕಡೆಯ ಸೈನಿಕರಲ್ಲಿ ಆಹಾಕಾರವೆದ್ದಿತು. ನಮ್ಮ ಸೈನ್ಯದಲ್ಲಿ ರಣೋತ್ಸಾಹ ಮರಳಿತು.

    ಮೂರನೇ ದಿನಕ್ಕೆ ಪುನಃ ರಾಯಚೂರು ನಮ್ಮ ವಶಕ್ಕೆ ಬಂತು. ಮುಂದೆ ಸತತವಾಗಿ ನಡೆದ ದಂಡಯಾತ್ರೆಗಳಲ್ಲಿ ಬಹಮನಿ ಸುಲ್ತಾನರು ಐದು ಭಾಗಗಳಾಗಿ ಛಿಧ್ರಿಸಿ ಹೋದರು...ಹಲವಾರು ವರ್ಷಗಳಿಂದ ಬಹಮನಿಯವರ ದಾಳಿಯಿಂದಾಗುತ್ತಿದ್ದ ಆತಂಕ ಮುಕ್ತಾಯವಾಯಿತು. 
    
    ಸಾಮ, ವೇದ, ದಾನ, ಭೇಧ ಮತ್ತು ದಂಡ ಇವಲ್ಲವನ್ನೂ ಅನುಸರಿಸಿ ವಿಜಯನಗರ ಸಾಮ್ರಾಜ್ಯವನ್ನು ಒಡಿಸ್ಸಾದವರೆಗೂ ವಿಸ್ತರಿಸಿದರು. ಅಂತಹ ಒಂದು ಸೈನ್ಯವನ್ನು ಇಡೀ ದಕ್ಷಿಣ ಭಾರತದಲ್ಲೇ ಯಾರೂ ಕಟ್ಟಿರಲಿಲ್ಲ…..
‌
ನ ಭೂತೋ ನ ಭವಿಷ್ಯತಿ..

ಸುಮಾರು ಒಂದು ಲಕ್ಷ ಸೈನಿಕರು, ಇಪ್ಪತ್ತು ಸಾವಿರ ಕುದುರೆಗಳ ಪಡೆ ಮತ್ತು ಐನೂರಕ್ಕೂ ಹೆಚ್ಚು ಆನೆಗಳು.
ಸಮುದ್ರತೀರದ ಹಲವಾರು ಬಂದರುಗಳಲ್ಲಿ ಶಕ್ತಿಶಾಲಿ ನೌಕಾಪಡೆ. ಇದಿಷ್ಟು 'ಕೈ ಜೀತದ ಸೇನೆ' ಅಂದರೆ ನಮಗೆಲ್ಲಾ ಸಂಬಳ, ಸವಲತ್ತುಗಳು ಸಿಗುತ್ತಿದ್ದುದು ಸೀದಾ ವಿಜಯನಗರದ ರಾಜಕೋಶದಿಂದ. ಇನ್ನು' ನಾಯಕ ಜೀತದ ಸೇನೆ' ಅಂದರೆ ಈ ಸೈನಿಕರು ಅಲ್ಲಿನ ಪ್ರಾಂತ್ಯದ ನಾಯಕರ ಅಧೀನದಲ್ಲಿದ್ದವರು. ವಿಜಯನಗರದ ಅಧೀನದಲ್ಲಿದ್ದ ಪ್ರಾಂತ್ಯದ ಸಾಮಂತರು ಈ ಸೈನ್ಯದ ಒಡೆಯರು. ನಮಗೆ ಹೆಚ್ಚಿನ ಸೈನ್ಯದ ಸಹಾಯ ಬೇಕಾದಾಗ ಈ ಸೈನ್ಯ ಬರುತ್ತಿತ್ತು. ಯುಧ್ಧ ಮುಗಿದ ಮೇಲೆ ತಮ್ಮ ತಮ್ಮ ಪ್ರಾಂತ್ಯಗಳಿಗೆ ಹೊರಟು ಹೋಗುತ್ತಿದ್ದರು.

      ವಿಜಯನಗರದ ಸೈನ್ಯಕ್ಕೆ ಗೆಲುವು ಅಭ್ಯಾಸವಾಗಿ ಹೋಗಿತ್ತು. ಎಷ್ಟೋ ಸಲ ನಮ್ಮ ಸೈನ್ಯ ಶತ್ರುರಾಜರ ಕೋಟೆಯ ಹೊರಗೆ ಬೀಡು ಬಿಟ್ಟರೆ ಸಾಕು, ಆ ಅಗಾಧ ಗಾತ್ರದ ಸೈನ್ಯವನ್ನು ನೋಡಿಯೇ ಅಲ್ಲಿಯ ರಾಜರು ಶರಣಾಗತರಾಗಿ ಬಿಡುತ್ತಿದ್ದರು. ಯುಧ್ಧವೇ ನಡೆಯದಂತೆ, ಯಾವ ಸಾವು ನೋವಿಲ್ಲದೆ ಆ ಪ್ರಾಂತ್ಯ ನಮ್ಮ ಸಾಮ್ರಾಜ್ಯಕ್ಕೆ ಸೇರ್ಪಡೆಯಾಗುತ್ತಿತ್ತು.

   ಅಂದು ಉದಯಗಿರಿಯನ್ನು ಅಲ್ಲಿನ ರಾಜರಿಂದ  ವಶಪಡಿಸಿಕೊಂಡದ್ದೂ ಹಾಗೇನೇ. ಸುಮಾರು ಒಂದೂವರೆ ವರ್ಷ ಮುತ್ತಿಗೆ ಹಾಕಿ ಕಾದೆವು...ಅವರಾಗೇ ಒಡಿಸ್ಸಾದ ಕಡೆಗೆ ಓಡಿಹೋಗುವ ತನಕ.
   
     ಪದೇ ಪದೇ ಕಿರಿಕಿರಿ ಕೊಡುತ್ತಿದ್ದ  ಕಳಿಂಗದ  ರಾಜ ಗಜಪತಿಯನ್ನು ನಿಶ್ಕ್ರಿಯೆ ಗೊಳಿಸಿದ್ದಂತೂ ಕೃಷ್ಣರಾಜರ ಚಾಣಾಕ್ಷತನದ ಪ್ರತೀಕ...ಅದು ಆಗಿದ್ದು ಹೀಗೆ….

     ನಾವು ನಾಲ್ವರು ಕುದುರೆ ಸೈನಿಕರು ಕೃಷ್ಣದೇವರು ಕೊಟ್ಟ ರಹಸ್ಯವಾದ ಲಕೋಟೆಗಳನ್ನು ಬಚ್ಚಿಟ್ಟುಕೊಂಡು ಗಜಪತಿಯ ಕೋಟೆಯ ಹೊರವಲಯದಲ್ಲಿ ಕಾಣಿಸಿಕೊಂಡೆವು. ನಮ್ಮ ಮೇಲೆ ಅನುಮಾನಪಟ್ಟ ಅವರ ಸೈನಿಕರು ನಮ್ಮನ್ನು ಬಂದಿಸಿ ಅವರ ರಾಜರ ಬಳಿ ಕರೆದುಕೊಂಡು ಹೋದರು. ನಮ್ಮ ತಪಾಸಣೆ ನಡೆಸಿದಾಗ ನಾವು ಬಚ್ಚಿಟ್ಟುಕೊಂಡಿದ್ದ ಲಕೋಟೆಗಳು ದೊರೆತವು. ಆ ಲಕೋಟೆಗಳಲ್ಲಿ ಕೆಲವು ವಜ್ರಗಳು ಮತ್ತು ಒಂದು ಪತ್ರವಿತ್ತು. ಪತ್ರವನ್ನು ಓದುತ್ತಿದ್ದಂತೆ ಗಜಪತಿಗಳ ಮುಖದಿಂದ ಧಾರಾಕಾರವಾಗಿ ಬೆವರಿಳಿಯ ತೊಡಗಿತು. ಆ ಪತ್ರ ಅವರ ಒಂಭತ್ತು ಸೇನಾಧಿಕಾರಿಗಳನ್ನುದ್ದೇಶಿಸಿ ಬರೆದಿದ್ದು. ಅದರಲ್ಲಿ ಕೃಷ್ಣದೇವರಾಯುರು ಮಾಡಿಕೊಂಡ ರಹಸ್ಯದ ಸಂಧಾನದಂತೆ ಈ ಸೇನಾಧಿಕಾರಿಗಳು ಗಜಪತಿಯವರನ್ನು ಹಿಡಿದು ಕೊಡಲು ಒಪ್ಪಿದ್ದಕ್ಕೆ ಸಂತುಷ್ಟರಾಗಿ ಈ ವಜ್ರಗಳನ್ನು ಕಳುಹಿಸುತ್ತಿದ್ದೇನೆ ಎಂದಿತ್ತು. ಅಸಲಿಗೆ ಅಂತಹದ್ದೇನೂ ನಡೆದೇ ಇರಲಿಲ್ಲ. ಇದು ದೇವರಾಯರ" ಭೇಧ" ತಂತ್ರ! ಅದು ಯಶಸ್ವಿಯೂ ಆಯಿತು. ಗಜಪತಿಯವರು ತಲೆಮರೆಸಿಕೊಂಡು ಓಡಿಹೋದರು.

 ವಿಜಯನಗರ ಸಾಮ್ರಾಜ್ಯ ಒಡಿಸ್ಸಾದ ಕಟ್ಟಕ್ ನಗರದವರೆಗೂ ವಿಸ್ತಾರಗೊಂಡಿತು. ಕೆಲ ತಿಂಗಳುಗಳ ನಂತರ ಮೆತ್ತಗಾದ ಗಜಪತಿಯವರು ಕ್ಷಮೆಬೇಡಿ, ಸಂಧಾನ. ಮಾಡಿಕೊಂಡು ಮತ್ತು ತಮ್ಮ ಮಗಳು ತುಕ್ಕಾದೇವಿಯನ್ನು ಕೃಷ್ಣದೇವರಾವರಿಗೆ  ಮದುವೆಮಾಡಿಕೊಟ್ಟು ಹಲವಾರು ವರ್ಷಗಳ ವೈರತ್ವಕ್ಕೆ ವಿದಾಯ ಹೇಳಿದರು.

     ನಮ್ಮ ಸೈನ್ಯದಲ್ಲಿ ಹಲವಾರು ನುರಿತ ಬಿಲ್ವಿದ್ಯೆಗಾರರಿದ್ದರು. ಬಹುತೇಕರು ಮುಸ್ಲೀಮರು. ಕೃಷ್ಣದೇವರಾಯರಿಗೆ ಹೆಚ್ಚು ಸೈನಿಕರಿಗೆ ಬಿಲ್ವಿದ್ಯೆಯನ್ನು ಕಲಿಸಲೆಂದು ಇವರಿಗೆಲ್ಲಾ ಬಡ್ತಿಕೊಟ್ಟು ಪ್ರೋತ್ಸಾಹಿಸಿ ಕೆಲವರನ್ನೂ ದಂಡನಾಯಕರುಗಳನ್ನಾಗಿಯೂ ನೇಮಿಸಿದರು. ಅದರಲ್ಲಿ ಗಿಲಾನಿ ಸಹೋದರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದ ದಂಡನಾಯಕರು. ಕೃಷ್ಣದೇವರಾಯರು ಇವರಿಗೆ ವಿಷೇಶ ಬಡ್ತಿಕೊಟ್ಟು ತರಬೇತಿ ದಂಡನಾಯಕರನ್ನಾಗಿ ನೇಮಿಸಿದ್ದರು. ತರಬೇತಿ ಸಮಯದಲ್ಲಿ ಇವರು ಮುಸ್ಲಿಂ ಸೈನಿಕರನ್ನು ಸಾಮ್ರಾಜ್ಯದ ವಿರುದ್ದ ಪ್ರೇರೇಪಿಸುತ್ತಿರುತ್ತಾರೆ ಎನ್ನುವ ಮಾತು ಅಲ್ಲಲ್ಲಿ ಗುಸುಗುಸು ಸುದ್ದಿಯಾಗತೊಡಗಿತು. ಈ ವಿಷಯ ಕೃಷ್ಣದೇವರಾಯರ ಕಿವಿಗೂ ಮುಟ್ಟಿತು ಆದರೆ ರಾಯರು ಅದೇಕೋ ಈ ವಿಷಯವನ್ನು ನಂಬಲೇ ಇಲ್ಲಾ…

     ತಪ್ಪು ಮಾಡಿದರಾ?

Comments

Popular posts from this blog

ದೂರದಿಂದ ಬಂದವರು

ಗೂಢಾಚಾರಿಕೆಯಿಂದ ಮುಕ್ತಿ ಯಾತ್ರೆಗೆ

ನಾಟ್ಯರಾಣಿ ಚಿನ್ನಮ್ಮದೇವಿ