ರಣಕಹಳೆ ಕೂಗೀತೇ?
ಈಗಾಗಲೇ ಒಂದು ತಿಂಗಳಾಯಿತು ರಾಯಚೂರಿನ ಕೋಟೆಗೆ ಮುತ್ತಿಗೆ ಹಾಕಿ. ಕೋಟೆಯೊಳಗಿರುವ ಸುಲ್ತಾನರ ಸೈನಿಕರು ಮಣಿಯುವಂತೆ ಕಾಣುತ್ತಿಲ್ಲವಂತೆ. ವಿಜಯನಗರದ ಸೈನ್ಯಕ್ಕೆ ಕೋಟೆ ಬಾಗಿಲನ್ನು ಒಡೆದು ಒಳನುಗ್ಗುವುದೇನು ದೊಡ್ಡಮಾತಲ್ಲ, .ಆದರೆ ಹಾಗೆ ಮಾಡಬೇಡಿ ಎಂಬ ಸಲಹೆಯನ್ನು ಕೊಟ್ಟರಂತೆ, ಮಾಜಿ ಸೈನ್ಯಾಧಿಕಾರಿಗಳು ಮತ್ತು ಸೈನಿಕರು.
ವಿಜಯನಗರದ ಸೈನ್ಯದಲ್ಲಿ ಇನ್ನೂರಕ್ಕೂ ಹೆಚ್ಚು ಮಾಜಿ ಸೈನಿಕರ ತಂಡವೂ ಬಂದಿದೆ. ಹಿಂದಿನ ಯುಧ್ಧಗಳಲ್ಲಿ ಭಾಗವಹಿಸಿದ ಅವರ ಅನುಭವಗಳನ್ನು ಹೇಳುತ್ತಾರೆ ಮತ್ತು ಸಲಹೆ ಕೊಡುತ್ತಿರುತ್ತಾರೆ. ಸುಲ್ತಾನರ ಸೈನಿಕರು ಎಷ್ಟು ಕ್ರೂರಿ ಹಾಗು ನಿರ್ದಯಿಗಳು ಎನ್ನುವುದರ ಬಗ್ಗೆ ಇವರಿಗೆ ಚೆನ್ನಾಗಿ ಪರಿಚಯವಿತ್ತು.
' ನೀವು ಕೋಟೆ ಬಾಗಿಲನ್ನು ಒಡೆದು ಒಳಹೊಕ್ಕರೆ ಅಲ್ಲಿ ಮಕ್ಕಳು ಮತ್ತು ಹೆಣ್ಣು ಮಕ್ಕಳನ್ನು ಸಾಲಾಗಿ ನಿಲ್ಲಿಸಿರುತ್ತಾರೆ. ನೀವು ಯಾವಾಗ ಹಿಮ್ಮೆಟ್ಟುತ್ತೀರೋ ಆಗ ಹಠಾತ್ತನೆ ನಿಮ್ಮ ಮೇಲೆ ಆಕ್ರಮಣ ಮಾಡುತ್ತಾರೆ...ಅಂತಹ ಹೇಡಿಗಳು ಇವರು'
ಈ ಸಲಹೆಗೆ ಕೃಷ್ಣದೇವರಾಯರೂ ಮಣಿಯಲೇ ಬೇಕಾಯಿತು. ಈ ದಿಗ್ಬಂಧನೆಗೆ ಇವತ್ತಲ್ಲಾ ನಾಳೆ ಮಣಿದೇ ಮಣಿಯಯುತ್ತಾರೆ ಆದರೆ ಅಸಹಾಯಕರ ಬಲಿ ತೆಗೆದುಕೊಂಡು ಕೋಟೆಯನ್ನು ವಶಪಡಿಸಿಕೊಡಿಸಿಕೊಳ್ಳುವುದು ಧರ್ಮವಲ್ಲ ಎಂದರು.
ಹಲವಾರು ದಿನಗಳ ನಂತರ ನಮ್ಮ ಓಂಕಾರಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದವನೇ ಸೀದಾ ನಾಯಕರುಗಳ ಢೇರೆಯೊಳಕ್ಕೆ ನುಗ್ಗಿ ಹೋದನೆಂದರೆ, ಏನೋ ಬೇಹುಗಾರಿಕೆಯ ಮಾಹಿತಿ ನೀಡಲು ಹೋಗಿದ್ದಾನೆಂದೇ ಅರ್ಥ.
ಮರುದಿನ ನಮ್ಮ ಭೇಟಿಯಾದಾಗ, ವಿಜಯನಗರ ಸೈನ್ಯದ ವಿರುದ್ಧ ಬಂಡೆತ್ತಿ ಬರುತ್ತಿರುವ ಬಿಜಾಪುರದ ಆದಿಲ್ ಷಾಹಿ ಸೈನ್ಯದ ಬಗ್ಗೆ ನನಗೂ ತಿಳಿಸಿದ. ಸುಮಾರು ಒಂದು ಲಕ್ಷ ನಲವತ್ತು ಸಾವಿರದ ಸೈನ್ಯವಂತೆ, ಅದೇನು ಮೊಂಡು ಧೈರ್ಯದಿಂದ ಏಳುವರೆ ಲಕ್ಷದ ಅಗಾಧ ಗಾತ್ರದ ವಿಜಯನಗರದ ಸೈನ್ಯದ ಜೊತೆ ಸೆಣೆಸಲು ಬರುತ್ತಿದ್ದಾರೆ.
' ಅಲ್ಲ ವಿಷಯ ಅಷ್ಟು ಸರಳವಾಗಿ ಸೈನಿಕರ ಸಂಖ್ಯೆಯದ್ದಲ್ಲ ಅನಂತೂ...ಈ ಸುಲ್ತಾನನ ಕುಯುಕ್ತಿ ಇರೋದು ಅವನು ಹೊಸತಾಗಿ ಖರೀದಿಸಿದ ಫಿರಂಗಿಗಳ ಮತ್ತು ಎಂಟು ನೂರು ಜನ ಫಿರಂಗಿ ತರಬೇತು ಪಡೆದಿರುವ ಸೈನಿಕರ ಪಡೆಯಿಂದ. ಈ ವಿಷಯವನ್ನು ಬಹಳ ರಹಸ್ಯವಾಗಿಡಲಾಗಿದೆ...ಬಿಜಾಪುರದ ಸೈನ್ಯ ಕೃಷ್ಣಾ ನದಿಯ ಉತ್ತರ ದಂಡೆಯ ಮೇಲೆ ಬೀಡುಬಿಟ್ಟಾಗಲೇ ಇವರ ಷಡ್ಯಂತ್ರ ಅರ್ಥವಾಗಬೇಕು. ನಮ್ಮ ಸೈನ್ಯವೇನಾದರೂ ಸಂಖ್ಯಾಬಲವಿದೆ ಎಂದು ದಂಡೆತ್ತಿ ಹೋದೆವೋ, ನದಿ ದಾಟುವಾಗ ಫಿರಂಗಿಗಳ ದಾಳಿ ಮಾಡುವ ಹುನ್ನಾರ. ಆ ಶಬ್ದಕ್ಕೆ ನದಿ ಮಧ್ಯದಲ್ಲಿರುವ ಗಜಪಡೆ, ಅಶ್ವಪಡೆಗಳ ಗತಿಯೇನು?...'
ಓಂಕಾರಿ ಇದನ್ನೆಲ್ಲಾ ಹೇಳಿದಾಗ ಅವರ ರಣತಂತ್ರ ಅರ್ಥವಾಯಿತು.
ಹಲವಾರು ದಿನಗಳಾಯಿತು ವಿಜಯನಗರದ ಸೈನ್ಯ ಬಿಜಾಪುರದ ಸೈನ್ಯದ ಕಡೆಗೆ ತಿರುಗಿಯೂ ನೋಡಲಿಲ್ಲ. ಆಗೊಮ್ಮೆ ಈಗೊಮ್ಮೆ ಕೆಲವು ಆ ಕಡೆಯ ಸೈನಿಕರು ನದಿಯನ್ನು ದಾಟಿ ರಾಯಚೂರಿನ ಕಡೆಬಂದು ಪುಸಕ್ಕನೆ ವಾಪಸ್ಸು ಹೋಗುತ್ತಿದ್ದರು. ನಮ್ಮ ಕಡೆಯ ಸೈನಿಕರು ಅವರನ್ನು ತಿರುಗಿಯೂ ನೋಡುತ್ತಿರಲಿಲ್ಲ.
ಅವರನ್ನು ಇಷ್ಟು ನಿರ್ಲಕ್ಷ್ಯ ಮಾಡಿದ್ದು ಅವರನ್ನು ಕೆರಳಿಸಿತ್ತೋ ಏನೋ ಒಂದು ದಿನ ಬೆಳ್ಳಂಬೆಳಗ್ಗೇನೆ ಬಿಜಾಪುರದ ಇಡೀ ಸೈನ್ಯ ಕೃಷ್ಣಾನದಿಯ ಉತ್ತರದ ದಂಡೆಯಿಂದಿಳಿದು, ನದಿಯನ್ನು ದಾಟಿ ದಕ್ಷಿಣದ ದಂಡೆಗೆ ಬಂದಿಳಿದು ತಮ್ಮ ಸೈನ್ಯದ ಢೇರೆಯನ್ನು ಸ್ಥಾಪಿಸೇ ಬಿಟ್ಟರು. ಸೈನಿಕರೆಲ್ಲಾ ಇನ್ನೇನು ಯುಧ್ಧ ಶುರುವಾಗೇ ಬಿಟ್ಟಿತು ಎಂದು ಮಾತಾಡತೊಡಗಿದರು.
ಕೃಷ್ಣದೇವರಾಯರು ಸೇನಾಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸದ್ಯಕ್ಕೆ ಯಾವ ದಾಳಿಯನ್ನು ನಡೆಸುವುದು ಬೇಡ, ಅವರ ಸಹನಾ ಶಕ್ತಿ ಕುಗ್ಗಿ ಅವರಾಗೇ ಏನಾದರೂ ಅವಾಂತರ ಮಾಡಿಕೊಳ್ಳಲಿ, ಅಲ್ಲಿವರೆಗೂ ಕಾಯೋಣ ಎಂದರು.
ಮುಂದಿನ ಹುಣ್ಣಿಮೆಯ ರಾತ್ರಿ ಆ ಅವಘಡವೂ ನಡದೇ ಹೋಯಿತು. ಸೈನಿಕರಿಂದಲ್ಲಾ...ಖುದ್ದು ಬಿಜಾಪುರದ ಸುಲ್ತಾನ ಇಸ್ಮಾಯಿಲ್ ಅದಿಲ್ ಷಾಹ ನಿಂದಲೇ.
ಅವತ್ತು ತಡರಾತ್ರಿಯವರೆಗೂ ಬಿಜಾಪುರದ ಬಿಡಾರದಿಂದ ಜೋರಾಗಿ ಮಾತುಕತೆ ನಡೆಯುತ್ತಿರುವುದು ನಮ್ಮ ಬಿಡಾರದವರೆಗೂ ಕೇಳಿಸುತ್ತಿತ್ತು. ಆ ಕಡೆಯಿಂದ ಬಂದ ನಮ್ಮ ಕೆಲವು ಗೂಢಾಚಾರರು ಅಲ್ಲಿ ಜೋರಾಗಿ ಮದಿರಾಪಾನದ ಕೂಟ ನಡೆಯುತ್ತಿದೆ , ಕೆಲವು ಸೈನ್ಯಾಧಿಕಾರಿಗಳು ಅದಿಲ್ ಷಾಹನ ಜೊತೆ ಮಾತುಕತೆಗಿಳಿದಿದ್ದಾರೆ, ಸುಲ್ತಾನ ತುಂಬಾ ಉತ್ತೇಜಿಸುತನಾಗಿದ್ದಾನೆ ಯಾವುದಕ್ಕೂ ಹುಷಾರಾಗಿರಬೇಕು ಎಂದು ಹೇಳಿದರು.
ಈ ವಿಷಯ ಕೃಷ್ಣದೇವರಾಯರವರೆಗೂ ಹೋಗುವುದು ಬೇಡ, ಇನ್ನೂ ಹೆಚ್ಚು ಕಾವಲುಗಾರರನ್ನು ನಿಯಮಿಸಿದರಾಯಿತು ಎಂದು ರಾತ್ರಿ ಪಾಳಿಯ ಸೇನಾಧಿಕಾರಿಯರೇ ನಿರ್ಧರಿಸಿದರು.
ನಡುರಾತ್ರಿವರೆಗೂ ಎಚ್ಚರಿಕೆಯಿಂದ ಇದ್ದ ಸೈನಿಕರು ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಬೆಳಗಾತ್ತದೆ ಎಂದು ಅಲ್ಲಲ್ಲೇ ವಿಶ್ರಮಿಸಿಲು ಆರಂಭಿಸಿದರು. ಹಾಗೇ ಜೋಂಪು ಹಿಡಿದುಬಿಟ್ಟಿತ್ತು.
ಅದೇ ಸಮಯಕ್ಕೆ ಇನ್ನೂ ಮದಿರೆಯ ಮತ್ತಿನಲ್ಲಿದ್ದ ಅದಿಲ್ ಷಾ ಕೆಲವು ಸೈನಿರೊಂದಿಗೆ ಕಳ್ಳರಂತೆ ನಮ್ಮ ಬಿಡಾರಕ್ಕೆ ನುಗ್ಗಿ ಮಲಗಿದ್ದ ಕೆಲವು ಸೈನಿಕರನ್ನು ಕೊಂದು, ಕುದುರೆ ಲಾಯಕ್ಕೆ ನುಗ್ಗಿ ಕೆಲವು ಕುದುರೆಗಳನ್ನು ಎಳೆದುಕೊಂಡುಕೊಂಡು ಹೋಗೇ ಬಿಟ್ಟರು.
ಬೆಳಗಾಗುತ್ತಲೇ ಈ ವಿಷಯ ವಿಜಯನಗರದ ಬಿಡಾರದಲ್ಲಿ ಗುಲ್ಲೆದ್ದು ಹೋಯಿತು. ಇನ್ನು ಕೃಷ್ಣದೇವರಾಯರಿಗೆ ಈ ವಿಷಯ ಗೊತ್ತಾದರೆ ಏನಾಗುತ್ತದೆಯೋ, ಅವರ ಕೋಪಕ್ಕೆ ಯಾರಾರು ತುತ್ತಾಗುತ್ತಾರೋ ನೋಡಬೇಕು.
ಆದರೆ ಬೆಳಗ್ಗೆ ಎಂದಿನಂತೆ ಕೃಷ್ಣದೇವರಾಯರು ಸ್ನಾನ ಮುಗಿಸಿ ಪೂಜೆಗೆ ಬಂದಾಗ ಶಾಂತವಾಗೇ ಬಂದಾಗ ನನಗೆ ಆಶ್ಚರ್ಯವಾಯಿತು. ಅವರ ಮುಂದೆ ಮಂಗಳಾರತಿ ತಟ್ಟೆ ಹಿಡಿದು ನಿಂತಾಗ ಸೂಕ್ಷ್ಮವಾಗಿ ಗಮನಿಸಿದೆ, ಆಗ ತಿಳಿಯಿತು ಅವರ ಸಂಯಮದ ಗಾಢತೆ. ಸ್ವಲ್ಪ ಹೊತ್ತು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಮನಸ್ಸಿನಲ್ಲೇ ಪ್ರಾರ್ಥಿಸಿದರು. ಕಣ್ಣು ತೆರೆದವರೇ
' ಅನಂತ ಶಾಸ್ತ್ರಿಗಳೇ ಈ ದಿನ ಯುದ್ದ ಪ್ರಾರಂಭಿಸಲು ಸೂಕ್ತವಾದ ದಿನವೇ'?
ಈಗ ಕಕ್ಕಾಬಿಕ್ಕಿಯಾಗುವ ಸರದಿ ನನ್ನದು,
' ಮಹಾಪ್ರಭು ನಮ್ಮ ಹಿರಿಯ ಶಾಸ್ತ್ರಿಗಳೊಂದಿಗೆ ಸಮಾಲೋಚಿಸಿ ತಮ್ಮ ಬಳಿ ಬರುತ್ತೀನಿ'
'ಹಾಗೇ ಮಾಡಿ..' ಎಂದು ಹೇಳಿ ಅಲ್ಲಿಂದ ನಿರ್ಗಮಿಸಿದರು.
ನಂತರ ಪೂಜೆಗೆ ಬಂದ ಕುಮಾರ ವೀರಯ್ಯ, ಪೆಮ್ಮಸಾನಿ ರಾಮಲಿಂಗ ನಾಯಕರುಗಳ ದಿರಿಸು ನೋಡಿ ಇನ್ನೇನು ಮಂಗಳಾರತಿ ತೆಗೆದುಕೊಂಡು ಕುದುರೆ ಹತ್ತಿ ಶತ್ರುಗಳ ಬಿಡಾರದ ಕಡೆ ದೌಡಾಯಿಸುತ್ತಾ ಹೋಗುವುದೇ ಬಾಕಿ ಎನ್ನುವಂತೆ ತಯಾರಾಗಿದ್ದಾರೆ. ಅವರ ಆನೆಗಳೂ, ಕುದುರೆಗಳೂ ಅಣಿಯಾಗಿ ನಿಂತಿವೆ.
ಅಷ್ಟರಲ್ಲೇ ನಮ್ಮ ಹಿರಿಯರಾದ ಶಾಮಾಶಾಸ್ತ್ರಿಗಳು ಬಂದು ಕೃಷ್ಣದೇವರಾಯರ ಮಾವ ಕುಮಾರ ವೀರಯ್ಯನವರ ಜೊತೆ ಮಾತನಾಡಲು ಪ್ರಾರಂಭಿಸಿದರು. ಅವರೂ ಕೃಷ್ಣದೇವರಾಯರಂತೆ 'ಈ ದಿನ ಯುಧ್ಧ ಪ್ರಾರಂಭಿಸಲು ಸೂಕ್ತವೇ?' ಎಂದು ಕೇಳಿದರು.
ಇವರುಗಳಿಗೆಲ್ಲಾ ಯುಧ್ಧವೆಂದರೆ ಏನು ಒಂದು ಪಂದ್ಯವೇ ?
ಕುಡಿತದ ಅಮಲಿನಲ್ಲಿ ಬಂದ ಇಸ್ಮಾಯಿಲ್ ಅದಿಲ್ ಷಾಹ... ವಿಜಯನಗರದ ಸೈನ್ಯವನ್ನು ಕೆಣಕಿ ಹೋಗಿದ್ದಾರೆ ಆದರೂ ಇವರೆಲ್ಲರೂ ಎಷ್ಟು ಸಂಯಮದಿಂದ ಯುಧ್ಧಕ್ಕೆ ಸನ್ನಧ್ಧರಾಗುತ್ತಿದ್ದಾರೆ ಎಂಬುದೇ ನನಗೆ ಆಶ್ಚರ್ಯವಾಯಿತು.
ವಿಜಯನಗರದ ಸೈನ್ಯದ ಬಲ, ಸೇನಾಧಿಕಾರಗಳ ನಾಯಕತ್ವ, ಎಲ್ಲದಕ್ಕೂ ಮಿಗಿಲಾಗಿ ಕೃಷ್ಣದೇವರಾಯರ ಸಾಹಸ ಶೌರ್ಯದ ಹಿನ್ನಲೆಯ ಸ್ಪೂರ್ತಿ ಇದರಿಂದಾಗಿ ಇವರಿಗೆಲ್ಲಾ ಈ ಹಂತದ ಸ್ಥೈರ್ಯ.
"ಹೌದು ಇವತ್ತು ಪ್ರಶಸ್ಥವಾದ ದಿನ, ವಿಜಯಲಕ್ಷ್ಮಿ ಖಂಡಿತಾ ಓಲಿಯುತ್ತಾಳೆ" ಎಂದು ಶಾಮಾಶಾಸ್ತ್ರಿಗಳು ಘೋಷಿಸಿದ್ದೇ ಸರಿ
ಪೆದ್ದಸಾನಿ ರಾಮಲಿಂಗ ನಾಯಕರು, ಸೇನಾಧಿಕಾರಿಯೊಬ್ಬರಿಗೆ ಕಣ್ಸನ್ನೆ ಮಾಡಿದರು.
ಅದೆಲ್ಲಿಂದ ಬಂತೋ ನೂರಾರು ಕಹಳೆಗಳ, ತಮ್ಮಟೆಗಳ, ಢೋಲುಗಳ ಆಕಾಶವೇ ಬಿರಿಯುವಂತ, ಎದೆ ನಡುಗಿಸುವ, ಕಿವಿ ಗಡಚಿಕ್ಕವ ರಣಕೇಕೆ, ಆನೆಗಳ ಗೀಳು, ಕುದುರೆಗಳ ಕೆನೆತ..
ಜೈ ವಿರೂಪಾಕ್ಷ..
ಹರಹರ ಮಹಾದೇವ...
ಸೈನಿಕರ ಒಕ್ಕೊರಲಿನ ಕೂಗು ದಶದಿಕ್ಕುಗಳಿಗೆ ಹರಡಿತು.



Comments
Post a Comment